ನವದೆಹಲಿ: ವಾರ್ಷಿಕ ವೇತನ ಹೆಚ್ಚಳದ ದಿನಾಂಕಕ್ಕೆ ಒಂದು ದಿನ ಮೊದಲೇ ನಿವೃತ್ತಿ ಹೊಂದುವ ಕೇಂದ್ರ ಸರ್ಕಾರಿ ನೌಕರರಿಗೆ ಲಭಿಸುವ ಪಿಂಚಣಿಯನ್ನು ಲೆಕ್ಕ ಹಾಕಲು, ಕಾಲ್ಪನಿಕ ವೇತನವನ್ನು ಮಾನದಂಡವಾಗಿ ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯ ಈ ಕುರಿತು ಕೇಂದ್ರ ಸಿಬ್ಬಂದಿ ಸಚಿವಾಲಯವು ಆದೇಶ ಹೊರಡಿಸಿದೆ. ಇದರಿಂದ 48.66 ಲಕ್ಷ ನೌಕರರಿಗೆ ಅನುಕೂಲವಾಗಲಿದೆ.
ಜುಲೈ 1 ಅಥವಾ ಜನವರಿ 1 ಅನ್ನು ವೇತನ ಹೆಚ್ಚಳದ ದಿನಾಂಕವನ್ನಾಗಿ ಪರಿಗಣಿಸಬಹುದು ಎಂದು ಫೆಬ್ರುವರಿ 20ರಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿತ್ತು. ಅಂದರೆ ಜೂನ್ 30 ಅಥವಾ ಡಿಸೆಂಬರ್ 31ರಂದು ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವ ನೌಕರರ ಪಿಂಚಣಿ ಲೆಕ್ಕ ಹಾಕಲು ಈ ದಿನಾಂಕಗಳನ್ನು ಪರಿಗಣಿಸುವಂತೆ ಸೂಚಿಸಿತ್ತು.
ಇನ್ನು ಮುಂದೆ ಜುಲೈ 1 ಅಥವಾ ಜನವರಿ 1 ಅನ್ನು ತಮ್ಮ ವೇತನ ಬಡ್ತಿಯ ದಿನಾಂಕವಾಗಿ ಆಯ್ಕೆ ಮಾಡಲು ನೌಕರರಿಗೆ ಅವಕಾಶ ಸಿಗಲಿದೆ.
ಆದರೆ, ಈ ದಿನಾಂಕಗಳಂದು ನೀಡಲಾಗುವ ಕಾಲ್ಪನಿಕ ವೇತನ ಹೆಚ್ಚಳವನ್ನು ಇತರೆ ಪಿಂಚಣಿ ಸೌಲಭ್ಯ ಪಡೆಯುವ ಸಂಬಂಧ ಲೆಕ್ಕ ಹಾಕಲು ಮಾನದಂಡವಾಗಿ ಪರಿಣಿಸುವಂತಿಲ್ಲ. ತಮಗೆ ಸ್ವೀಕಾರಾರ್ಹವಾಗಿರುವ ಪಿಂಚಣಿ ಲೆಕ್ಕ ಮಾಡುವ ಉದ್ದೇಶಕ್ಕಾಗಿಯಷ್ಟೇ ಪರಿಗಣಿಸಬೇಕಿದೆ ಎಂದು ಸುಪ್ರೀಂ ಕೋರ್ಟ್‌ನ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಸರ್ಕಾರದ ಆದೇಶವು ಸ್ವಾಗತಾರ್ಹವಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಏಕೀಕೃತ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಕೇಂದ್ರ ಸರ್ಕಾರಿ ನೌಕರರಿಗೂ ಕಾಲ್ಪನಿಕ ವೇತನದ ಪ್ರಯೋಜನವನ್ನು ವಿಸ್ತರಿಸಬೇಕು ಎಂದು ಅಖಿಲ ಭಾರತ ಎನ್‌ಪಿಎಸ್ ನೌಕರರ ಒಕ್ಕೂಟದ ಅಧ್ಯಕ್ಷ ಮಂಜೀತ್ ಸಿಂಗ್ ಪಟೇಲ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.