ADVERTISEMENT

ಯೂರಿಯಾ ರಹಿತ ರಸಗೊಬ್ಬರದ ಬೆಲೆ ಹೆಚ್ಚಿಸದಂತೆ ಕೇಂದ್ರ ತಾಕೀತು

ಪಿಟಿಐ
Published 9 ಏಪ್ರಿಲ್ 2021, 12:46 IST
Last Updated 9 ಏಪ್ರಿಲ್ 2021, 12:46 IST
ಹೊಲದಲ್ಲಿ ರಸಗೊಬ್ಬರದ ಹಾಕುತ್ತಿರುವುದು–ಸಾಂದರ್ಭಿಕ ಚಿತ್ರ
ಹೊಲದಲ್ಲಿ ರಸಗೊಬ್ಬರದ ಹಾಕುತ್ತಿರುವುದು–ಸಾಂದರ್ಭಿಕ ಚಿತ್ರ   

ನವದೆಹಲಿ: ಡಿಎಪಿಯಂತಹ ಯೂರಿಯಾ ರಹಿತ ರಸಗೊಬ್ಬರದ ಗರಿಷ್ಠ ಮಾರಾಟ ಬೆಲೆಯನ್ನು (ಎಂಆರ್‌ಪಿ) ಹೆಚ್ಚಿಸಬಾರದು ಎಂದು ಕೇಂದ್ರ ಸರ್ಕಾರವು ರಸಗೊಬ್ಬರ ಕಂಪನಿಗಳಿಗೆ ಶುಕ್ರವಾರ ನಿರ್ದೇಶನ ನೀಡಿದೆ. ರಸಗೊಬ್ಬರವನ್ನು ಹಳೆಯ ಬೆಲೆಗೇ ಮಾರಾಟ ಮಾಡಬೇಕು ಎಂದು ಕೇಂದ್ರವು ಸೂಚಿಸಿದೆ.

ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರವಾಗಿ ನಿರ್ದೇಶನವೊಂದನ್ನು ರಸಗೊಬ್ಬರ ಕಂಪನಿಗಳಿಗೆ ನೀಡಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾದ ಕಾರಣ ದೇಶಿ ಮಾರುಕಟ್ಟೆಯಲ್ಲಿಯೂ ಯೂರಿಯೇತರ ರಸಗೊಬ್ಬರದ ಬೆಲೆ ಜಾಸ್ತಿಯಾಗಿದೆ.

ಡಿಎಪಿ, ಎಂಒಪಿ ಹಾಗೂ ಎನ್‌ಪಿಕೆ ರಸಗೊಬ್ಬರದ ಚಿಲ್ಲರೆ ಮಾರಾಟ ದರವು ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಿದೆ. ಈ ರಸಗೊಬ್ಬರಗಳ ದರವನ್ನು ಕಂಪನಿಗಳೇ ನಿರ್ಧರಿಸುತ್ತವೆ. ಇವಕ್ಕೆ ಕೇಂದ್ರ ಸರ್ಕಾರವು ನಿಗದಿತ ಮೊತ್ತವನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತದೆ.

ADVERTISEMENT

‘ಡಿಎಪಿ, ಎಂಒಪಿ ಮತ್ತು ಎನ್‌ಪಿಕೆ ರಸಗೊಬ್ಬರಗಳ ದರ ಹೆಚ್ಚಳ ಮಾಡಬಾರದು ಎಂಬ ಸೂಚನೆಯನ್ನು ಕಂಪನಿಗಳು ಒಪ್ಪಿವೆ’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್‌ಸುಖ್‌ ಮಾಂಡವೀಯ ತಿಳಿಸಿದರು. ರೈತರಿಗೆ ಈ ರಸಗೊಬ್ಬರಗಳು ಹಳೆಯ ದರಕ್ಕೆ ಸಿಗಲಿವೆ ಎಂದರು.

ಡಿಎಪಿಯ ಹೊಸ ಚೀಲದ ಮೇಲೆ ‘₹ 1,700’ ಎಂದು ಮುದ್ರಿಸಿರುವ ಇಫ್ಕೊ, ‘ಇದು ರೈತರಿಗೆ ಮಾರಾಟ ಮಾಡುವ ದರ ಅಲ್ಲ’ ಎಂದು ಗುರುವಾರ ಸ್ಪಷ್ಟಪಡಿಸಿತ್ತು. ಸಂಗ್ರಹದಲ್ಲಿ ಇರುವ 11.26 ಲಕ್ಷ ಟನ್ ರಸಗೊಬ್ಬರವನ್ನು ಹಳೆಯ ದರಕ್ಕೆ (ಪ್ರತಿ ಚೀಲಕ್ಕೆ ₹ 1,200) ರೈತರಿಗೆ ಮಾರಾಟ ಮಾಡಲಾಗುವುದು ಎಂದೂ ಅದು ತಿಳಿಸಿತ್ತು.

ಕೆಲವು ಖಾಸಗಿ ಕಂಪನಿಗಳು ಡಿಎಪಿ ಬೆಲೆಯನ್ನು ಏಪ್ರಿಲ್‌ 1ರಿಂದ ಅನ್ವಯ ಆಗುವಂತೆ ಪ್ರತಿ ಚೀಲಕ್ಕೆ ₹ 1,700ಕ್ಕೆ ಹೆಚ್ಚಿಸಿವೆ. ಇನ್ನು ಕೆಲವು ಕಂಪನಿಗಳು ಡಿಎಪಿ ಬೆಲೆಯನ್ನು ₹ 1,600ಕ್ಕೆ ಹಾಗೂ ₹ 1,495ಕ್ಕೆ ಹೆಚ್ಚಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.