ADVERTISEMENT

ಗೋಧಿ ದಾಸ್ತಾನಿಗೆ ಮಿತಿ ಹೇರಿದ ಕೇಂದ್ರ ಸರ್ಕಾರ

ಪಿಟಿಐ
Published 11 ಡಿಸೆಂಬರ್ 2024, 14:39 IST
Last Updated 11 ಡಿಸೆಂಬರ್ 2024, 14:39 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಏರಿಕೆ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು, ದಾಸ್ತಾನಿಗೆ ಮಿತಿ ಹೇರಿದೆ.

ಈ ಮೊದಲು ಸಗಟು ವರ್ತಕರಿಗೆ 2 ಸಾವಿರ ಟನ್‌ ಗೋಧಿ ದಾಸ್ತಾನಿಗೆ ಅವಕಾಶವಿತ್ತು. ಈಗ 1 ಸಾವಿರ ಟನ್‌ಗೆ ತಗ್ಗಿಸಿದೆ. ಚಿಲ್ಲರೆ ಮತ್ತು ದೊಡ್ಡ ಮಾರಾಟಗಾರರು ಪ್ರತಿ ಮಳಿಗೆಗೆ 5 ಟನ್‌ ಮಾತ್ರ ದಾಸ್ತಾನು ಮಾಡಿಕೊಳ್ಳಬೇಕಿದೆ. ಈ ಹಿಂದೆ 10 ಟನ್‌ ದಾಸ್ತಾನಿಗೆ ಅನುಮತಿ ನೀಡಲಾಗಿತ್ತು. ಈ ಆದೇಶವು ಮುಂದಿನ ವರ್ಷದ ಮಾರ್ಚ್‌ 31ರ ವರೆಗೆ ಅನ್ವಯವಾಗಲಿದೆ.

ಆಹಾರ ಸಂಸ್ಕರಣೆ ಮಾಡುವವರು ತಿಂಗಳ ಸಾಮರ್ಥ್ಯದ ಶೇ 50ರಷ್ಟನ್ನು ಮಾತ್ರ ದಾಸ್ತಾನು ಮಾಡಿಕೊಳ್ಳಬಹುದಾಗಿದೆ. ಈ ಆದೇಶವು ಮುಂದಿನ ವರ್ಷದ ಏಪ್ರಿಲ್‌ವರೆಗೆ ಅನ್ವಯ ಆಗಲಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಬುಧವಾರ ತಿಳಿಸಿದೆ.

ADVERTISEMENT

ಗೋಧಿ ದಾಸ್ತಾನು ಮಾಡುವವರು ಪ್ರತಿ ಶುಕ್ರವಾರ ಇಲಾಖೆಯ ಪೋರ್ಟಲ್‌ನಲ್ಲಿ ದಾಸ್ತಾನು ಪ್ರಮಾಣದ ಬಗ್ಗೆ ನಮೂದಿಸಬೇಕು. ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ದಾಸ್ತಾನು ಇದ್ದರೆ ಅಧಿಸೂಚನೆ ಪ್ರಕಟವಾದ 15 ದಿನದಲ್ಲಿ ನಿಗದಿಪಡಿಸಿದ ಪ್ರಮಾಣಕ್ಕೆ ತಗ್ಗಿಸಬೇಕು. ಆದೇಶ ಉಲ್ಲಂಘಿಸಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಆಹಾರ ಪದಾರ್ಥಗಳ ದರ ಏರಿಕೆ ನಿಯಂತ್ರಿಸಲು ಹಾಗೂ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಇದೇ ವರ್ಷದ ಜೂನ್‌ 24 ಮತ್ತು ಸೆಪ್ಟೆಂಬರ್‌ 9ರಂದು ದಾಸ್ತಾನು ಮಿತಿ ನಿಯಂತ್ರಿಸಲು ಆದೇಶವನ್ನು ಸರ್ಕಾರ ಜಾರಿ ಮಾಡಿತ್ತು. ಈಗ ಮತ್ತೆ ಪರಿಷ್ಕೃತ ಆದೇಶ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.