ADVERTISEMENT

ಕಬ್ಬಿಗೆ ಎಫ್‌ಆರ್‌ಪಿ ಹೆಚ್ಚಳ, ಕ್ವಿಂಟಾಲ್‌ಗೆ ₹ 290 ನಿಗದಿ

ಪಿಟಿಐ
Published 25 ಆಗಸ್ಟ್ 2021, 14:27 IST
Last Updated 25 ಆಗಸ್ಟ್ 2021, 14:27 IST
   

ನವದೆಹಲಿ: ಸ‌ಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಲ್‌ಗೆ ಪಾವತಿಸಬೇಕಿರುವ ಮೊತ್ತವನ್ನು ಕೇಂದ್ರ ಸರ್ಕಾರವು ₹ 5ರಷ್ಟು ಹೆಚ್ಚಿಸಿದೆ. ಈ ವರ್ಷದ ಅಕ್ಟೋಬರ್‌ನಿಂದ ಅನ್ವಯವಾಗುವಂತೆ ಕಾರ್ಖಾನೆಗಳು ‍ಪ್ರತಿ ಕ್ವಿಂಟಲ್‌ಗೆ ₹ 290ರಷ್ಟು ಪಾವತಿಸಬೇಕಿದೆ.

2021–22ನೇ ಮಾರುಕಟ್ಟೆ ವರ್ಷಕ್ಕೆ ಅನ್ವಯವಾಗುವಂತೆ ‘ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ’ (ಎಫ್‌ಆರ್‌ಪಿ) ಹೆಚ್ಚಿಸಲು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯ ಸಭೆಯು ಬುಧವಾರ ಒಪ್ಪಿಗೆ ನೀಡಿದೆ. 2020–21ನೇ ಮಾರುಕಟ್ಟೆ ವರ್ಷಕ್ಕೆ ಕೇಂದ್ರವು ಪ್ರತಿ ಕ್ವಿಂಟಾಲ್‌ ಕಬ್ಬಿಗೆ ₹ 285 ಎಫ್‌ಆರ್‌ಪಿ ನಿಗದಿ ಮಾಡಿತ್ತು.

ಕಬ್ಬಿನಿಂದ ಉತ್ಪಾದನೆ ಆಗುವ ಸಕ್ಕರೆ ಪ್ರಮಾಣವು ಶೇಕಡ 10ರಷ್ಟಿದ್ದರೆ ₹ 290 ಎಫ್‌ಆರ್‌ಪಿ ಸಿಗಲಿದೆ. ಸಕ್ಕರೆ ಉತ್ಪಾದನೆ ಪ್ರಮಾಣವು ಶೇ 10ಕ್ಕಿಂತ ಜಾಸ್ತಿ ಇದ್ದರೆ, ಪ್ರತಿ ಹೆಚ್ಚುವರಿ ಶೇ 0.1ಕ್ಕೆ ಕ್ವಿಂಟಲ್‌ಗೆ ಹೆಚ್ಚುವರಿಯಾಗಿ ₹ 2.90 ಸಿಗಲಿದೆ. ಸಕ್ಕರೆ ಸಿಗುವ ಪ್ರಮಾಣ ಶೇ 10ಕ್ಕಿಂತ ಕಡಿಮೆ ಇದ್ದರೆ, ಪ್ರತಿ ಶೇ 0.1ರಷ್ಟು ಕಡಿಮೆ ಪ್ರಮಾಣಕ್ಕೆ ಎಫ್‌ಆರ್‌ಪಿಯಲ್ಲಿ ₹ 2.90ರಷ್ಟು ಕಡಿತ ಆಗಲಿದೆ.

ADVERTISEMENT

ರೈತರ ಹಿತ ಕಾಯುವ ಉದ್ದೇಶದಿಂದ, ಸಕ್ಕರೆ ಸಿಗುವ ಪ್ರಮಾಣವು ಶೇ 9.5ಕ್ಕಿಂತ ಕಡಿಮೆ ಇದ್ದರೆ, ಎಫ್‌ಆರ್‌ಪಿಯಲ್ಲಿ ಹೆಚ್ಚುವರಿ ಕಡಿತ ಇರುವುದಿಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಪೀಯೂಷ್ ಗೋಯಲ್ ತಿಳಿಸಿದರು.

ಎಫ್‌ಆರ್‌ಪಿ ಹೆಚ್ಚಿಸಿರುವ ಪರಿಣಾಮವಾಗಿ, ಸಕ್ಕರೆಯ ಕನಿಷ್ಠ ಮಾರಾಟ ದರವನ್ನು ಹೆಚ್ಚಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಸಚಿವರು, ‘ಹೆಚ್ಚಿಸಬೇಕು ಎಂದೇನೂ ಇಲ್ಲ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.