ADVERTISEMENT

ಅಡುಗೆ ಎಣ್ಣೆ ದಾಸ್ತಾನು ಮಿತಿ: ಆದೇಶದ ಅನುಷ್ಠಾನಕ್ಕೆ ರಾಜ್ಯಗಳಿಗೆ ಸೂಚನೆ

ಪಿಟಿಐ
Published 9 ಫೆಬ್ರುವರಿ 2022, 15:28 IST
Last Updated 9 ಫೆಬ್ರುವರಿ 2022, 15:28 IST
   

ನವದೆಹಲಿ: ಅಡುಗೆ ಎಣ್ಣೆ ಹಾಗೂ ಎಣ್ಣಬೀಜಗಳ ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸುವ ಉದ್ದೇಶದಿಂದ, ರಾಜ್ಯ ಸರ್ಕಾರಗಳು ಇವುಗಳ ದಾಸ್ತಾನು ಮಿತಿಗೆ ಸಂಬಂಧಿಸಿದಂತೆ ತಾನು ಹೊರಡಿಸಿರುವ ಆದೇಶವನ್ನು ಅನುಷ್ಠಾನಕ್ಕೆ ತರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಹೀಗೆ ಮಾಡುವಾಗ ಪೂರೈಕೆ ವ್ಯವಸ್ಥೆಯಲ್ಲಿ ಸಮಸ್ಯೆ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರವು ಹೇಳಿದೆ. ಫೆಬ್ರುವರಿ 3ರಂದು ಆದೇಶವೊಂದನ್ನು ಹೊರಡಿಸಿದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು, ಅಡುಗೆ ಎಣ್ಣೆ ಹಾಗೂ ಎಣ್ಣೆಬೀಜಗಳ ದಾಸ್ತಾನು ಮಿತಿಯನ್ನು ಜೂನ್ 30ರವರೆಗೆ ವಿಸ್ತರಿಸಿದೆ. ದಾಸ್ತಾನು ಇರಿಸಿಕೊಳ್ಳಬಹುದಾದ ಪ್ರಮಾಣ ಎಷ್ಟು ಎಂಬುದನ್ನೂ ಹೇಳಿದೆ.

ದಾಸ್ತಾನು ಮಿತಿಯ ಅನುಷ್ಠಾನದಿಂದಾಗಿ ನ್ಯಾಯಸಮ್ಮತವಲ್ಲದ ವಾಣಿಜ್ಯ ಚಟುವಟಿಕೆಗಳಿಗೆ ಮಿತಿ ಬೀಳುತ್ತದೆ ಎಂದು ಪ್ರಕಟಣೆ ಹೇಳಿದೆ.

ADVERTISEMENT

ಅಡುಗೆ ಎಣ್ಣೆಯ ರಿಟೇಲ್ ಮಾರಾಟಗಾರರು 30 ಕ್ವಿಂಟಲ್ ದಾಸ್ತಾನು ಇರಿಸಿಕೊಳ್ಳಬಹುದು, ಸಗಟು ಮಾರಾಟಗಾರರು 500 ಕ್ವಿಂಟಲ್ ದಾಸ್ತಾನು ಇರಿಸಿಕೊಳ್ಳಬಹುದು. ಎಣ್ಣೆಬೀಜಗಳನ್ನು ರಿಟೇಲ್ ಮಾರಾಟಗಾರರು 100 ಕ್ವಿಂಟಲ್‌ವರೆಗೆ, ಸಗಟು ಮಾರಾಟಗಾರರು 2,000 ಕ್ವಿಂಟಲ್‌ವರೆಗೆ ದಾಸ್ತಾನು ಇರಿಸಿಕೊಳ್ಳಬಹುದು. ರಫ್ತು ಮತ್ತು ಆಮದು ವಹಿವಾಟಿನಲ್ಲಿ ತೊಡಗಿರುವವರನ್ನು ಕೆಲವು ಷರತ್ತುಗಳಿಗೆ ಒಳಪಡಿಸಿ ಈ ಆದೇಶದ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ.

ಆದೇಶದಲ್ಲಿ ಹೇಳಿರುವ ಮಿತಿಗಿಂತ ಹೆಚ್ಚಿನ ದಾಸ್ತಾನು ಇದ್ದಲ್ಲಿ ವರ್ತಕರು ಅದನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಪೋರ್ಟಲ್ ಮೂಲಕ ತಿಳಿಸಬೇಕು. ಮೂವತ್ತು ದಿನಗಳಲ್ಲಿ ದಾಸ್ತಾನನ್ನು ತಮಗೆ ನಿಗದಿ ಮಾಡಲಾಗಿರುವ ಮಿತಿಯೊಳಗೆ ತರಬೇಕು.

ಭಾರತವು ದೇಶಿ ಮಾರುಕಟ್ಟೆಯ ಅಗತ್ಯದ ಶೇ 60ರಷ್ಟು ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಕಳೆದ ಕೆಲವು ತಿಂಗಳುಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆ ಹೆಚ್ಚಳ ಆಗುತ್ತಿರುವ ಕಾರಣ, ದೇಶಿ ರಿಟೇಲ್ ಬೆಲೆಯಲ್ಲಿ ಕೂಡ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.