ADVERTISEMENT

ವಿತ್ತೀಯ ಕೊರತೆ ₹8 ಲಕ್ಷ ಕೋಟಿ

ಕೇಂದ್ರದಿಂದ ರಾಜ್ಯಗಳಿಗೆ ₹8.34 ಲಕ್ಷ ಕೋಟಿ ತೆರಿಗೆ ಪಾಲಾಗಿ ವರ್ಗಾವಣೆ: ಸಿಜಿಎ

ಪಿಟಿಐ
Published 28 ನವೆಂಬರ್ 2025, 14:49 IST
Last Updated 28 ನವೆಂಬರ್ 2025, 14:49 IST
.
.   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್ ಅಂತ್ಯದವರೆಗೆ ಕೇಂದ್ರ ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಿನ ಅಂತರವಾದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 52.6ರಷ್ಟಾಗಿದೆ.

ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ಇದು ₹8.25 ಲಕ್ಷ ಕೋಟಿಯಾಗಿದೆ ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರ (ಸಿಜಿಎ) ವರದಿ ಶುಕ್ರವಾರ ತಿಳಿಸಿದೆ. 2024–25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಶೇ 46.5 ರಷ್ಟಿತ್ತು.

2025–26ರಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.4ಕ್ಕೆ (ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ₹15.69 ಲಕ್ಷ ಕೋಟಿ) ತಗ್ಗಿಸಲು ಸರ್ಕಾರ ಬಜೆಟ್‌ನಲ್ಲಿ ಗುರಿ ನಿಗದಿಪಡಿಸಲಾಗಿದೆ. 

ADVERTISEMENT

ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಸರ್ಕಾರವು ₹18 ಲಕ್ಷ ಕೋಟಿ (ಶೇ 51.5) ವರಮಾನ ಸ್ವೀಕರಿಸಿದೆ. ಕೇಂದ್ರ ಸರ್ಕಾರ ಸ್ವೀಕರಿಸಿದ ಈ ಮೊತ್ತದ ಪೈಕಿ ₹12.74 ಲಕ್ಷ ಕೋಟಿ ತೆರಿಗೆ ವರಮಾನದಿಂದ ಸಂಗ್ರಹಿಸಿದೆ. ₹4.89 ಲಕ್ಷ ಕೋಟಿ ತೆರಿಗೆಯೇತರ ವರಮಾನ ಮತ್ತು ಇತರೆ ಮೂಲಗಳಿಂದ ₹37,095 ಕೋಟಿ ಸಂಗ್ರಹಿಸಿದೆ.

ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಗಳಿಗೆ ₹8.34 ಲಕ್ಷ ಕೋಟಿಯನ್ನು ತೆರಿಗೆ ಪಾಲಾಗಿ ವರ್ಗಾಯಿಸಿದೆ. ಇದು ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹1.11 ಲಕ್ಷ ಕೋಟಿಯಷ್ಟು ಅಧಿಕವಾಗಿದೆ ಎಂದು ತಿಳಿಸಿದೆ. 

ಇದೇ ಅವಧಿಯಲ್ಲಿ ಸರ್ಕಾರದ ಒಟ್ಟು ವೆಚ್ಚವು ₹26.25 ಲಕ್ಷ ಕೋಟಿಯಾಗಿದೆ. ಈ ಪೈಕಿ ಬಡ್ಡಿಗೆ ₹6.73 ಲಕ್ಷ ಕೋಟಿ ಪಾವತಿಸಲಾಗಿದ್ದು,
₹2.46 ಲಕ್ಷ ಕೋಟಿ ಸಬ್ಸಿಡಿಗಳಿಗೆ ನೀಡಲಾಗಿದೆ ಎಂದು ತಿಳಿಸಿದೆ.

Highlights -

‘ರಾಜ್ಯಗಳ ಬಂಡವಾಳ ಹೆಚ್ಚಳ ನಿರೀಕ್ಷೆ’

ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯಗಳ ಬಂಡವಾಳ ವೆಚ್ಚವು ಶೇ 4ರಿಂದ ಶೇ 6ಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಕ್ರಿಸಿಲ್‌ ರೇಟಿಂಗ್ಸ್‌ ಹೇಳಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಬಂಡವಾಳ ವೆಚ್ಚವು ಶೇ 7ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯ ಬಂಡವಾಳ ವೆಚ್ಚ ಕಡಿಮೆ ಎಂದು ಹೇಳಿದೆ. ವಸತಿ ನಗರಾಭಿವೃದ್ಧಿ ಮತ್ತು ನೀರಾವರಿ ಸೇರಿದಂತೆ ನೀರು ಸರಬರಾಜು ಮತ್ತು ನೈರ್ಮಲ್ಯವು ಕೂಡ ಬಂಡವಾಳ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿವೆ. 

ರಾಜ್ಯಗಳ ಬಂಡವಾಳ ವೆಚ್ಚದ ಶೇ 94ರಷ್ಟು ಪಾಲನ್ನು ಅಗ್ರ 18 ರಾಜ್ಯಗಳು ಹೊಂದಿವೆ. ಜಿಎಸ್‌ಟಿ ದರ ಪರಿಷ್ಕರಣೆಯ ಬಳಿಕ ವರಮಾನ ಸಂಗ್ರಹವು ಮಂದಗೊಂಡಿರುವುದರಿಂದ ರಾಜ್ಯಗಳ ವರಮಾನ ಕೊರತೆ ಹೆಚ್ಚುತ್ತಿದೆ. ಕೇಂದ್ರದಿಂದ ಅನುದಾನ ಹಂಚಿಕೆಯು ನಿಧಾನವಾಗಿದೆ. ಮತ್ತೊಂದೆಡೆ ವಿವಿಧ ಯೋಜನೆಗಳಿಗೆ ಮೀಸಲಿಟ್ಟ ಮೊತ್ತ ಹಾಗೂ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹೆಚ್ಚಿದ ಅನುದಾನದ ಹಂಚಿಕೆಯಿಂದಾಗಿ ವೆಚ್ಚವು ಶೇ 7ರಿಂದ ಶೇ 9ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.