ADVERTISEMENT

ಆರ್ಥಿಕತೆಯ ಮುಂದಿನ ಸವಾಲು

ಅಮೆರಿಕದ ಗೋಲ್ಡಮನ್‌ ಸ್ಯಾಚ್ಸ್‌ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:45 IST
Last Updated 16 ಆಗಸ್ಟ್ 2019, 19:45 IST
   

ನವದೆಹಲಿ (ಪಿಟಿಐ): ಬಂಡವಾಳ ಹೂಡಿಕೆಯು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು, ಅಗ್ಗದ ಬಡ್ಡಿ ದರದ ಪ್ರಯೋಜನವನ್ನು ಗ್ರಾಹಕರಿಗೆ ತ್ವರಿತವಾಗಿ ವರ್ಗಾಯಿಸದಿರುವುದು ಭಾರತದ ಆರ್ಥಿಕತೆ ಮುಂದಿರುವ ಸದ್ಯದ ಸವಾಲುಗಳಾಗಿವೆ ಎಂದು ಅಮೆರಿಕದ ಹೂಡಿಕೆ ಬ್ಯಾಂಕ್‌ ಆಗಿರುವ ಗೋಲ್ಡಮನ್‌ ಸ್ಯಾಚ್ಸ್‌ ವಿಶ್ಲೇಷಿಸಿದೆ.

‘ಆರ್ಥಿಕ ವೃದ್ಧಿ ದರ ಸದೃಢವಾಗಿದ್ದರೂ, ಹೊಸ ಬಂಡವಾಳ ಹೂಡಿಕೆಯು ನಿರೀಕ್ಷಿತ ಮಟ್ಟದಲ್ಲಿ ಇಲ್ಲ’ ಎಂದು ಗೋಲ್ಡ್‌ಮನ್‌ ಸ್ಯಾಚ್ಸ್‌ನ ಭಾರತದ ಮುಖ್ಯ ಆರ್ಥಿಕತಜ್ಞೆ ಪ್ರಾಚಿ ಮಿಶ್ರಾ ಹೇಳಿದ್ದಾರೆ.

‘ದೆಹಲಿ ಮತ್ತು ಮುಂಬೈನಲ್ಲಿನ ನೀತಿ ನಿರೂಪಕರು, ವಹಿವಾಟುದಾರರು, ಬ್ಯಾಂಕ್‌ ಅಧಿಕಾರಿಗಳು ಮತ್ತು ರಾಜಕೀಯ ವಿಶ್ಲೇಷಕರು ಒಳಗೊಂಡಂತೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆದಾರರನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸಲಾಗಿದೆ.

ADVERTISEMENT

‘ರೆಪೊ ದರ ತಗ್ಗಿಸಿರುವ ಆರ್‌ಬಿಐನ ಅಗ್ಗದ ಹಣಕಾಸು ನೀತಿಯನ್ನು ವಾಣಿಜ್ಯ ಬ್ಯಾಂಕ್‌ಗಳು ಆದ್ಯತೆ ಮೇರೆಗೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರದಿರುವುದು ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ನಿಧಾನಗೊಂಡಿರುವುದರ ಬಗ್ಗೆ ಆರ್ಥಿಕತೆಯಲ್ಲಿ ಕಳವಳ ಮೂಡಿಸಿದೆ.

‘ಹೊಸ ಬಂಡವಾಳ ಹೂಡಿಕೆಯಲ್ಲಿ ಉತ್ಸಾಹ ಕಂಡು ಬರದಿರುವುದು, ಆರ್‌ಬಿಐ ಬಡ್ಡಿ ದರ ಕಡಿತದ ಪ್ರಯೋಜನವನ್ನು ಬ್ಯಾಂಕ್‌ಗಳು ತ್ವರಿತವಾಗಿ ತಮ್ಮ ಗ್ರಾಹಕರಿಗೆ ವರ್ಗಾಯಿಸದಿರುವುದು ಮತ್ತು ಜಿಎಸ್‌ಟಿ ಸಂಗ್ರಹ ನಿಧಾನಗೊಂಡಿರುವುದು ಭಾರತದ ಅರ್ಥ ವ್ಯವಸ್ಥೆಯು ಸದ್ಯಕ್ಕೆ ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ’ ಎಂದು ಅವರು ವಿಶ್ಲೇಷಿಸಿದ್ದಾರೆ.

’ಕಳೆದ ಒಂದು ದಶಕದಲ್ಲಿ ಸರಾಸರಿ ಡಿಜಿಪಿ ಹೆಚ್ಚಳವು ಶೇ 7ರಷ್ಟಿದೆ. ಇದರಲ್ಲಿನ ಬಳಕೆ ಪ್ರಮಾಣವು ಮೂರು ನಾಲ್ಕಾಂಶದಷ್ಟಿದ್ದರೆ, ಒಂದು ಮೂರಾಂಶ ಮಾತ್ರ ಹೂಡಿಕೆಗೆ ಸಂಬಂಧಿಸಿದೆ. ಸುಧಾರಣಾ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತಂದರೆ ಆರ್ಥಿಕತೆ ಬೆಳವಣಿಗೆಯ ಹಾದಿಗೆ ಮರಳಲಿದೆ. ಈ ನಿಟ್ಟಿನಲ್ಲಿ ಸರ್ಕಾರ ದೊಡ್ಡ ಘೋಷಣೆ ಮಾಡುವುದನ್ನು ಎದುರು ನೋಡುತ್ತಿರುವುದಾಗಿ ಉದ್ಯಮ ಪ್ರಮುಖರು ತಿಳಿಸಿದ್ದಾರೆ’ ಎಂದು ಮಿಶ್ರಾ ಹೇಳಿದ್ದಾರೆ.

ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) 2010ರಿಂದ 2014ರ ಅವಧಿಯಲ್ಲಿ ಸರಾಸರಿ ಶೇ 6.7ರಿಂದ 2015ರಿಂದ 2019ರ ಅವಧಿಯಲ್ಲಿ ಶೇ 7.3ರಷ್ಟಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಸರಾಸರಿ ಹಣದುಬ್ಬರವು ಶೇ 10ರಿಂದ ಶೇ 5ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.