ADVERTISEMENT

ನೀತಿ ಸಂಹಿತೆ: ಚಂದಾ ತಪ್ಪಿತಸ್ಥೆ

ಶ್ರೀಕೃಷ್ಣಾ ಸ್ವತಂತ್ರ ತನಿಖಾ ಸಮಿತಿಯ ವರದಿಯಲ್ಲಿ ಉಲ್ಲೇಖ

ಪಿಟಿಐ
Published 30 ಜನವರಿ 2019, 20:00 IST
Last Updated 30 ಜನವರಿ 2019, 20:00 IST
ಚಂದಾ ಕೊಚ್ಚರ್‌
ಚಂದಾ ಕೊಚ್ಚರ್‌   

ನವದೆಹಲಿ: ಐಸಿಐಸಿಐ ಬ್ಯಾಂಕ್‌ನ ನೀತಿ ಸಂಹಿತೆಯನ್ನು ಮಾಜಿ ಸಿಇಒ ಚಂದಾ ಕೊಚ್ಚರ್‌ ಅವರು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಬ್ಯಾಂಕ್‌ ನೇಮಿಸಿದ್ದ ಬಿ. ಎನ್‌. ಶ್ರೀಕೃಷ್ಣಾ ಸ್ವತಂತ್ರ ತನಿಖಾ ಸಮಿತಿಯು ವರದಿ ನೀಡಿದೆ.

ನೀತಿ ಸಂಹಿತೆಗಳ ಪಾಲನೆ ಮತ್ತು ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಚಂದಾ ಕೊಚ್ಚರ್‌ ಅವರು ತಪ್ಪು ಎಸಗಿದ್ದಾರೆ. ಬ್ಯಾಂಕ್‌ನ ಆಂತರಿಕ ನಿಯಮಗಳ ಪಾಲನೆಯಲ್ಲಿ ಕಾರ್ಯತತ್ಪರತೆ ತೋರಿಲ್ಲ, ನೀತಿ ಸಂಹಿತೆ ಪಾಲನೆ ಮಾಡಿಲ್ಲ ಮತ್ತು ಹಿತಾಸಕ್ತಿ ಸಂಘರ್ಘ ತಡೆಯಲು ಮುಂದಾಗಿರಲಿಲ್ಲ ಎಂದೂ ಸಮಿತಿಯು ತಿಳಿಸಿದೆ.

ಸಮಿತಿಯ ವರದಿಯನ್ನು ಸ್ವೀಕರಿಸಿರುವ ಬ್ಯಾಂಕ್‌ನ ನಿರ್ದೇಶಕ ಮಂಡಳಿಯು, ಕೊಚ್ಚರ್‌ ಅವರು ಈ ಮೊದಲು ನೀಡಿದ್ದ ರಾಜೀನಾಮೆಯನ್ನು ಸೇವೆಯಿಂದ ವಜಾ ಎಂದೇ ಪರಿಗಣಿಸಲು ನಿರ್ಧರಿಸಿದೆ. ಇದರಿಂದಾಗಿ ಅವರಿಗೆ ಕೊಡಬೇಕಾಗಿದ್ದ ವೇತನ ಹೆಚ್ಚಳ, ಬೋನಸ್‌, ವೈದ್ಯಕೀಯ ಭತ್ಯೆ ಮುಂತಾದ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳಲಾಗಿದೆ. 2009ರ ಏಪ್ರಿಲ್‌ನಿಂದ 2018ರ ಮಾರ್ಚ್‌ವರೆಗೆ ಪಾವತಿಸಿದ್ದ ಬೋನಸ್‌ ಮರಳಿ ಪಡೆಯಲಾಗುವುದು ಎಂದೂ ಬ್ಯಾಂಕ್‌ ತಿಳಿಸಿದೆ.

ADVERTISEMENT

ಹಿಂದೊಮ್ಮೆ ದೇಶಿ ಬ್ಯಾಂಕಿಂಗ್‌ ಕ್ಷೇತ್ರದ ಜನಪ್ರಿಯ ಬ್ಯಾಂಕರ್‌ ಆಗಿದ್ದ, ರಿಟೇಲ್‌ ಬ್ಯಾಂಕಿಂಗ್‌ ವಹಿವಾಟನ್ನು ಗಮನಾರ್ಹವಾಗಿ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಚಂದಾ ಅವರು ಈಗ ಬ್ಯಾಂಕಿಂಗ್‌ ನಿಯಮಗಳನ್ನೆಲ್ಲ ಗಾಳಿಗೆ ತೂರಿದ ತಪ್ಪಿತಸ್ಥೆ ಎನ್ನುವ ಆಪಾದನೆಗೆ ಗುರಿಯಾಗಿದ್ದಾರೆ.

ವಿಡಿಯೊಕಾನ್‌ ಗ್ರೂಪ್‌ಗೆ ₹ 3,250 ಕೋಟಿ ಸಾಲ ಮಂಜೂರಾತಿಯಲ್ಲಿ ಕ್ರಿಮಿನಲ್‌ ಒಳಸಂಚು ಎಸಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಈ ಸಾಲ ಮಂಜೂರಾತಿಯಲ್ಲಿ ಚಂದಾ ಅವರ ಪತಿ ದೀಪಕ್‌ ಕೊಚ್ಚರ್‌ ಮತ್ತವರ ಕುಟುಂಬದ ಸದಸ್ಯರು ಲಾಭ ಪಡೆದುಕೊಂಡಿದ್ದಾರೆ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ಆರೋಪಿಸಿ ಈ ಹಗರಣವನ್ನು ಬೆಳಕಿಗೆ ತಂದಿದ್ದರು.

ವಿಡಿಯೊಕಾನ್‌ ಗ್ರೂಪ್‌ ಸೇರಿದಂತೆ ಕೆಲ ಸಾಲ ಮಂಜೂರಾತಿ ಪ್ರಕರಣಗಳಲ್ಲಿ ಅವರ ವಿರುದ್ಧ ‘ಹಿತಾಸಕ್ತಿ ಸಂಘರ್ಷ’ದ ದೂರುಗಳು ಕೇಳಿ ಬಂದಿದ್ದವು. ಈ ಕಾರಣಕ್ಕೆ ಸಿಇಒ ಹುದ್ದೆಗೆ ಅವರು ಅಕ್ಟೋಬರ್‌ 4ರಂದು ರಾಜೀನಾಮೆ ನೀಡಿದ್ದರು.

ಆರೋಪಗಳೇನು?
ವಿಡಿಯೊಕಾನ್‌ ಸಮೂಹಕ್ಕೆ 2012ರಲ್ಲಿ ₹ 3,250 ಕೋಟಿ ಸಾಲ ನೀಡಿಕೆಯಲ್ಲಿ ಹಿತಾಸಕ್ತಿ ಸಂಘರ್ಷ, ಸ್ವಜನ ಪಕ್ಷಪಾತ ಮತ್ತು ಪರಸ್ಪರ ಕೊಡು–ತೆಗೆದುಕೊಳ್ಳುವ ವ್ಯವಹಾರ ನಡೆದಿದೆ. ವಿಡಿಯೊಕಾನ್‌ ಗ್ರೂಪ್‌ ಅಧ್ಯಕ್ಷ ವೇಣುಗೋಪಾಲ್‌ ಧೂತ್‌ ಅವರು ಚಂದಾ ಕೊಚ್ಚರ್‌ ಅವರ ಪತಿ ದೀಪಕ್‌ ಕೊಚ್ಚರ್‌ ಅವರ ಜತೆ ವಾಣಿಜ್ಯ ಸಂಬಂಧ ಹೊಂದಿದ್ದಾರೆ. ಪರಸ್ಪರ ಕೊಡುಕೊಳ್ಳುವುದರ ಆಧಾರದ ಮೇಲೆ ಸಾಲ ಮಂಜೂರು ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು.

ಐಸಿಐಸಿಐ ಬ್ಯಾಂಕ್‌ ಒಳಗೊಂಡಂತೆ ಬ್ಯಾಂಕ್‌ಗಳ ಒಕ್ಕೂಟದಿಂದ ಸಾಲ ಮಂಜೂರಾತಿ ಆಗುತ್ತಿದ್ದಂತೆ ವಿಡಿಯೊಕಾನ್‌ ಅಧ್ಯಕ್ಷ ವೇಣುಗೋಪಾಲ್‌ ಧೂತ್‌ ಅವರು, ದೀಪಕ್‌ ಕೊಚ್ಚರ್‌ ಒಡೆತನದ ಎನ್‌ಯುಪವರ್‌ ರಿನ್ಯೂವಬಲ್ಸ್‌ ಸಂಸ್ಥೆಯಲ್ಲಿ ₹ 64 ಕೋಟಿಗಳನ್ನು ಹೂಡಿಕೆ ಮಾಡಿದ್ದರು. ಇದೊಂದು ಪರಸ್ಪರ ಕೊಡು – ತೆಗೆದುಕೊಳ್ಳುವ ವ್ಯವಹಾರ ಆಗಿತ್ತು ಎಂದು ದೂರಲಾಗಿತ್ತು.

ವೃತ್ತಿ ಬದುಕಿನ ಏರಿಳಿತ: ಚಂದಾ ಕೊಚ್ಚರ್‌ ಅವರು 1984ರಲ್ಲಿ ಮ್ಯಾನೇಜ್‌ಮೆಂಟ್‌ ಟ್ರೈನೀ ಆಗಿ ಬ್ಯಾಂಕ್‌ಗೆ ಸೇರ್ಪಡೆಯಾಗಿದ್ದರು. 25 ವರ್ಷಗಳ ತಮ್ಮ ಸುದೀರ್ಘ ವೃತ್ತಿ ಬದುಕಿನಲ್ಲಿ ಬ್ಯಾಂಕ್‌ನ ಉನ್ನತ ಹುದ್ದೆ ಅಲಂಕರಿಸುವ ಮಟ್ಟಕ್ಕೆ ಬೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.