ADVERTISEMENT

ಷೆರ್ವನ್‌ನಿಂದ ₹8,300 ಕೋಟಿ ಹೂಡಿಕೆ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 14:50 IST
Last Updated 24 ಆಗಸ್ಟ್ 2024, 14:50 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಬೆಂಗಳೂರು: ಇಂಧನ ಕ್ಷೇತ್ರದ ಸಂಶೋಧನಾ ಸಂಸ್ಥೆ ಷೆರ್ವನ್‌ ಬೆಂಗಳೂರಿನಲ್ಲಿ ₹8,300 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಷೆರ್ವನ್‌ ಇಂಡಿಯಾ ಮುಖ್ಯಸ್ಥ ಅಕ್ಷಯ್‌ ಸಾಹ್ನಿ ಮತ್ತು ಪ್ರಧಾನ ವ್ಯವಸ್ಥಾಪಕಿ ಕೇಟ್‌ ಕಲಘನ್‌ ಜತೆಗೆ, ಶುಕ್ರವಾರ ನಡೆದ ಸಭೆಯ ನಂತರ ಅವರು ಈ ಮಾಹಿತಿ ನೀಡಿದ್ದಾರೆ.

‘ರಾಜ್ಯ ಸರ್ಕಾರದ ಸಹಯೋಗದಡಿ ಕಂಪನಿಯು ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಮತ್ತು ನಾವೀನ್ಯತೆ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಈ ಕೇಂದ್ರದ ಮೂಲಕ ಇಂಧನ ವ್ಯವಸ್ಥೆಯ ತಂತ್ರಜ್ಞಾನದ ಆವಿಷ್ಕಾರಗಳಿಗೆ ಒತ್ತು ನೀಡಲು ನಿರ್ಧರಿಸಲಾಗಿದೆ. ಎಂಜಿನಿಯರಿಂಗ್‌ ಮತ್ತು ಡಿಜಿಟಲ್‌ ಸೇವೆಗೆ ಸಂಬಂಧಿಸಿದಂತೆ 2025ರೊಳಗೆ 600 ತಂತ್ರಜ್ಞರನ್ನು ನೇಮಕ ಮಾಡಿಕೊಳ್ಳಲಾಗುವುದು. ಸರ್ಕಾರವು ತಾಂತ್ರಿಕ ಆವಿಷ್ಕಾರಕ್ಕೆ ಪೂರಕವಾದ ವಾತಾವರಣ ಸೃಷ್ಟಿಗೆ ಒತ್ತು ನೀಡಲಿದೆ’ ಎಂದು ಹೇಳಿದ್ದಾರೆ.

ಈಗಾಗಲೇ, ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಇವೆ. ಹಣಕಾಸು, ಆರೋಗ್ಯ, ರಿಟೇಲ್‌ ವ್ಯಾಪಾರ, ತಯಾರಿಕಾ ವಲಯ ಸೇರಿ ಭಾರತದ ಜಿಸಿಸಿಗಳಲ್ಲಿ ಶೇ 30ಕ್ಕಿಂತ ಹೆಚ್ಚು ಪಾಲನ್ನು ಬೆಂಗಳೂರು ಹೊಂದಿದೆ’ ಎಂದು ವಿವರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.