ADVERTISEMENT

ಪೇಮೆಂಟ್‌ ಗೇಟ್‌ವೇ ಖಾತೆಗಳಲ್ಲಿದ್ದ ಹಣ ಜಪ್ತಿ

ಪಿಟಿಐ
Published 16 ಸೆಪ್ಟೆಂಬರ್ 2022, 14:03 IST
Last Updated 16 ಸೆಪ್ಟೆಂಬರ್ 2022, 14:03 IST

ನವದೆಹಲಿ (ಪಿಟಿಐ): ಈಸ್‌ಬಜ್, ರೇಜರ್‌ಪೇ, ಕ್ಯಾಶ್‌ಫ್ರೀ ಮತ್ತು ಪೇಟಿಎಂ ಕಂಪನಿಗಳ ಆನ್‌ಲೈನ್ ಪಾವತಿ ಖಾತೆಯಲ್ಲಿನ ಒಟ್ಟು ₹ 46.67 ಕೋಟಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ.

ಚೀನಾ ಮೂಲದ ವ್ಯಕ್ತಿಗಳ ನಿಯಂತ್ರಣದಲ್ಲಿ ಇರುವ, ಆ್ಯಪ್‌ ಮೂಲಕ ತಕ್ಷಣಕ್ಕೆ ಸಾಲ ನೀಡುವ ಕಂಪನಿಗಳ ವ್ಯವಹಾರಗಳಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಅಡಿಯಲ್ಲಿ ಇ.ಡಿ. ಈಚೆಗೆ ರೇಜರ್‌ಪೇ, ಪೇಟಿಎಂ ಮತ್ತು ಕ್ಯಾಶ್‌ಫ್ರೀ ಕಂಪನಿಗಳಿಗೆ ಸೇರಿದ ಬೆಂಗಳೂರಿನಲ್ಲಿನ ಸ್ಥಳಗಳಲ್ಲಿ ಈಚೆಗೆ ದಾಳಿ ನಡೆಸಿತ್ತು.

ಬುಧವಾರದಿಂದ ದೆಹಲಿ, ಮುಂಬೈ, ಗಾಜಿಯಾಬಾದ್, ಲಖನೌ ಮತ್ತು ಗಯಾದಲ್ಲಿನ ಕೆಲವು ಸ್ಥಳಗಳಲ್ಲಿ ಶೋಧ ನಡೆದಿತ್ತು. ಬ್ಯಾಂಕ್‌ ಹಾಗೂ ಪೇಮೆಂಟ್‌ ಗೇಟ್‌ವೇಗಳಿಗೆ ಸೇರಿದ 16 ಸ್ಥಳಗಳಲ್ಲಿ ಕೂಡ ಶೋಧ ನಡೆದಿತ್ತು.

ADVERTISEMENT

‘ಶೋಧ ವೇಳೆ ಹಲವು ಮಹತ್ವದ ದಾಖಲೆಗಳು ದೊರೆತಿವೆ. ವರ್ಚುವಲ್ ಖಾತೆಗಳಲ್ಲಿ ದೊಡ್ಡ ಮೊತ್ತ ಇರುವುದು ಪತ್ತೆಯಾಗಿದೆ. ಈಸ್‌ಬಜ್‌ ಬಳಿ ₹ 33.36 ಕೋಟಿ, ರೇಜರ್‌ಪೇ ಬಳಿ ₹ 8.21 ಕೋಟಿ, ಕ್ಯಾಶ್‌ಫ್ರೀ ಬಳಿ ₹ 1.28 ಕೋಟಿ ಹಾಗೂ ಪೇಟಿಎಂ ಬಳಿ ₹ 1.11 ಕೋಟಿ ಪತ್ತೆಯಾಗಿದೆ’ ಎಂದು ಇ.ಡಿ. ಹೇಳಿದೆ.

ಇ.ಡಿ. ಕಾರ್ಯಾಚರಣೆಗೆ ಸಹಕಾರ ನೀಡುತ್ತಿರುವುದಾಗಿ ರೇಜರ್‌ಪೇ ವಕ್ತಾರರು ಹೇಳಿದ್ದಾರೆ. ‘ಜಪ್ತು ಮಾಡಲಾದ ಹಣವು ಕಂಪನಿಗೆ ಸೇರಿದ್ದಲ್ಲ’ ಎಂದು ಪೇಟಿಎಂ ಹೇಳಿದೆ. ಅಕ್ರಮ ವಹಿವಾಟು ನಡೆಸಿದ, ಅನುಮಾನಾಸ್ಪದವಾಗಿ ಕಂಡುಬಂದ ಎಲ್ಲ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ರೇಜರ್‌ಪೇ ಹೇಳಿದೆ. ಜಪ್ತು ಮಾಡಲಾದ ಹಣವು ತನಗೆ ಸೇರಿದ್ದಲ್ಲ ಎಂದೂ ಅದು ತಿಳಿಸಿದೆ.

‘ಇ.ಡಿ. ಹೇಳಿಕೆಯಲ್ಲಿರುವ ಹೆಸರುಗಳು ನಮ್ಮ ವರ್ತಕರಿಗೆ ಸೇರಿದ್ದಲ್ಲ’ ಎಂದು ಈಸ್‌ಬಜ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.