ADVERTISEMENT

ಸಿಎನ್‌ಜಿ ದರ ಮತ್ತೆ ಹೆಚ್ಚಳ; ಪಿಎನ್‌ಜಿ ಏರಿಕೆ ಇಲ್ಲ

ಪಿಟಿಐ
Published 7 ಏಪ್ರಿಲ್ 2022, 7:57 IST
Last Updated 7 ಏಪ್ರಿಲ್ 2022, 7:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಗುರುವಾರ ಪೆಟ್ರೋಲ್‌, ಡೀಸೆಲ್‌ ದರ ಪರಿಷ್ಕರಣೆಯಾಗಿಲ್ಲ. ಆದರೆ, ಸಿಎನ್‌ಜಿ ದರ ಪ್ರತಿ ಕೆ.ಜಿಗೆ ₹2.50ರಷ್ಟು ಹೆಚ್ಚಿಸಲಾಗಿದೆ. ಮಾರ್ಚ್‌ನಿಂದ ಈವರೆಗೂ ಪ್ರತಿ ಕೆ.ಜಿ ಸಿಎನ್‌ಜಿ ದರ ₹12.5 ಏರಿಕೆಯಾಗಿದೆ.

ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ, ದೆಹಲಿಯಲ್ಲಿ ಪ್ರತಿ ಕೆ.ಜಿ ಸಿಎನ್‌ಜಿ ದರ ₹69.11 ತಲುಪಿದೆ. ಬುಧವಾರ ಸಹ ಸಿಎನ್‌ಜಿ ದರ ₹2.50 ಹೆಚ್ಚಿಸಲಾಗಿತ್ತು.

ಕೊಳವೆ ಮೂಲಕ ಮನೆಗಳಿಗೆ ಪೂರೈಕೆಯಾಗುವ ಅಡುಗೆ ಅನಿಲ (ಪಿಎನ್‌ಜಿ) ದರ ಪರಿಷ್ಕರಣೆಯಾಗಿಲ್ಲ. ಪ್ರತಿ ಕ್ಯೂಬಿಕ್‌ ಮೀಟರ್‌ ಪಿಎನ್‌ಜಿಗೆ ₹41.61 ದರ ನಿಗದಿಯಾಗಿದೆ.

ADVERTISEMENT

ಗುರುವಾರ ಮುಂಬೈನಲ್ಲಿ ಸಿಎನ್‌ಜಿ ದರ 7 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಕೆ.ಜಿಗೆ ₹67 ಆಗಿದೆ. ಗುಜರಾತ್‌ ಗ್ಯಾಸ್‌ ₹6.50 ಹೆಚ್ಚಿಸಿದ್ದು, ಪ್ರತಿ ಕೆ.ಜಿ ಸಿಎನ್‌ಜಿ ₹76.98 ಆಗಿದೆ.

ನೈಸರ್ಗಿಕ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರವು ಏಪ್ರಿಲ್‌ 1ರಿಂದ ಎರಡು ಪಟ್ಟಿಗಿಂತ ಹೆಚ್ಚು ಏರಿಕೆ ಮಾಡಿದೆ. ನಿಯಂತ್ರಣಕ್ಕೆ ಒಳಪಟ್ಟಿರುವ ಹಳೆಯ ನಿಕ್ಷೇಪಗಳಿಂದ ಉತ್ಪಾದನೆ ಆಗುವ ಅನಿಲ ಬೆಲೆಯು 6.10 ಡಾಲರ್‌ಗೆ (ಪ್ರತಿ ಮಿಲಿಯನ್ ಬ್ರಿಟಿಷ‌್ ಥರ್ಮಲ್ ಯೂನಿಟ್‌ಗೆ) ಏರಿಕೆ ಆಗಿದೆ. ಅದರ ಪರಿಣಾಮವಾಗಿ ಸಿಎನ್‌ಜಿ ದರದಲ್ಲೂ ಏರಿಕೆಯಾಗುತ್ತಿದೆ.

ನೈಸರ್ಗಿ ಅನಿಲವನ್ನು ಸಿಎನ್‌ಜಿ ಆಗಿ ಪರಿವರ್ತಿಸಿ ವಾಹನಗಳಿಗೆ ಇಂಧನವಾಗಿ ಬಳಸಲಾಗುತ್ತಿದೆ. ಅದೇ ಅನಿಲವನ್ನು ಕೊಳವೆಗಳ ಮೂಲಕ ಮನೆ, ಕೈಗಾರಿಕೆಗಳಿಗೆ ಅಡುಗೆ ಹಾಗೂ ಇತರೆ ಉಪಯೋಗಗಳಿಗೆ ಬಳಸಲಾಗುತ್ತಿದೆ.

ಕಳೆದ 16 ದಿನಗಳಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ ತಲಾ ₹10ರಷ್ಟು ಏರಿಕೆಯಾಗಿದ್ದರೆ, ಗೃಹ ಬಳಕೆ ಅಡುಗೆ ಅನಿಲ ದರ ₹50ರಷ್ಟು ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.