ADVERTISEMENT

ಕೃಷಿ ಪತ್ತಿನ ಸಹಕಾರ ಸಂಘಗಳ ಕಂಪ್ಯೂಟರೀಕರಣಕ್ಕೆ ನೆರವು

ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಅನುಮೋದನೆ

ಪಿಟಿಐ
Published 29 ಜೂನ್ 2022, 21:06 IST
Last Updated 29 ಜೂನ್ 2022, 21:06 IST
   

ನವದೆಹಲಿ (ಪಿಟಿಐ): ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ದೇಶದ ಒಟ್ಟು 63 ಸಾವಿರಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಎಸಿಎಸ್‌) ಕಂಪ್ಯೂಟರೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಇದಕ್ಕಾಗಿ ಒಟ್ಟು ₹2,516 ಕೋಟಿ ಅನುದಾನ ಪ್ರಕಟಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ. ಸಂಘಗಳ ಕಾರ್ಯದಕ್ಷತೆ ಹೆಚ್ಚಿಸುವ, ವ್ಯವಹಾರದಲ್ಲಿ ಪಾರದರ್ಶಕತೆ ಹಾಗೂ ನಿಖರತೆ ತರುವುದು ಯೋಜನೆಯ ಉದ್ದೇಶ.

‘5 ವರ್ಷಗಳಲ್ಲಿ 63 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕಂಪ್ಯೂಟರೀಕರಣಗೊಳಿಸಲು ನಿರ್ಧರಿಸಲಾಗಿದೆ. ಒಟ್ಟಾರೆ ಅನುದಾನದಲ್ಲಿ ಕೇಂದ್ರದ ಪಾಲು ₹1,528 ಕೋಟಿ ಇರಲಿದೆ. ಯೋಜನೆಯಿಂದ ಸುಮಾರು 13 ಕೋಟಿ ರೈತರಿಗೆ ನೆರವಾಗಲಿದೆ’ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ADVERTISEMENT

‘ಕ್ಲೌಡ್‌ ಆಧಾರಿತವಾಗಿರುವ ಏಕರೂಪದ ತಂತ್ರಾಂಶ ಅಭಿವೃದ್ಧಿಪಡಿಸುವುದು. ಸೈಬರ್‌ ಭದ್ರತೆಯ ಜೊತೆಗೆ ದತ್ತಾಂಶ ಸಂಗ್ರಹಣೆಗೆ ಸಹಕಾರ ನೀಡುವುದು. ಹಳೆಯ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಸಂಘಗಳಿಗೆ ಅಗತ್ಯವಿರುವ ಹಾರ್ಡ್‌ವೇರ್‌ ಬೆಂಬಲ ಒದಗಿಸುವುದಕ್ಕೂ ಈ ಯೋಜನೆ ಸಹಕಾರಿಯಾಗಲಿದೆ. ಸಾಫ್ಟ್‌ವೇರ್‌ಗಳು ಸ್ಥಳೀಯ ಭಾಷೆ ಒಳಗೊಂಡಿರಲಿವೆ. ಇದರಿಂದ ಗ್ರಾಹಕರ ದಾಖಲೀಕರಣ ಸುಲಭವಾಗಲಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಸಂಘಗಳು ಬಳಸುತ್ತಿರುವ ತಂತ್ರಾಂಶಗಳಲ್ಲೂ ಏಕರೂಪತೆ ಇಲ್ಲ. ಅವು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿಬಿ) ಹಾಗೂ ಎಸ್‌ಟಿಸಿಬಿಗಳೊಂದಿಗೂ ಪರಸ್ಪರ ಸಂಪರ್ಕ ಹೊಂದಿಲ್ಲ. ‘ತ್ವರಿತಗತಿಯಲ್ಲಿ ಸಾಲ ಸೌಲಭ್ಯ ಒದಗಿಸುವುಕ್ಕೆ ಹಾಗೂ ಈ ಪ್ರಕ್ರಿಯೆಗೆ ತಗಲುವ ವೆಚ್ಚ ಕಡಿತಗೊಳಿಸುವುದಕ್ಕೂ ಯೋಜನೆ ನೆರವಾಗಲಿದೆ’ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.