ADVERTISEMENT

ಕಲ್ಲಿದ್ದಲು, ವಿದ್ಯುತ್ ಸೇರಿದಂತೆ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಶೂನ್ಯ ಬೆಳವಣಿಗೆ

ಪಿಟಿಐ
Published 20 ನವೆಂಬರ್ 2025, 23:41 IST
Last Updated 20 ನವೆಂಬರ್ 2025, 23:41 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ: ದೇಶದ ಎಂಟು ಪ್ರಮುಖ ಮೂಲಸೌಕರ್ಯ ವಲಯಗಳಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಯಾವ ಬೆಳವಣಿಗೆಯೂ ಆಗಿಲ್ಲ.

ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ ಮತ್ತು ಉಕ್ಕು ವಲಯಗಳಲ್ಲಿ ಬೆಳವಣಿಗೆ ಆಗಿದ್ದರೂ, ಕಲ್ಲಿದ್ದಲು ಮತ್ತು ವಿದ್ಯುತ್ ಉತ್ಪಾದನಾ ವಲಯಗಳಲ್ಲಿನ ಕುಸಿತವು ಒಟ್ಟಾರೆ ಬೆಳವಣಿಗೆಯು ಶೂನ್ಯ ಮಟ್ಟದಲ್ಲಿ ಇರುವಂತೆ ಮಾಡಿದೆ.

ADVERTISEMENT

ಎಂಟು ಪ್ರಮುಖ ಕೈಗಾರಿಕಾ ವಲಯಗಳಾದ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಉತ್ಪನ್ನಗಳು, ವಿದ್ಯುತ್, ರಸಗೊಬ್ಬರ, ಸಿಮೆಂಟ್‌ ಮತ್ತು ಉಕ್ಕು ಸೆಪ್ಟೆಂಬರ್‌ ತಿಂಗಳಲ್ಲಿ ಒಟ್ಟಾರೆ ಶೇ 3.3ರಷ್ಟು ಬೆಳವಣಿಗೆ ಕಂಡಿತ್ತು. ಬೆಳವಣಿಗೆ ಪ್ರಮಾಣವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಶೇ 3.8ರಷ್ಟು ಆಗಿತ್ತು.

ಈ ವರ್ಷದ ಅಕ್ಟೋಬರ್‌ನಲ್ಲಿ ಕಲ್ಲಿದ್ದಲು ಉತ್ಪಾದನೆಯು ಶೇ 8.5ರಷ್ಟು ಕುಸಿದಿದೆ, ವಿದ್ಯುತ್ ಉತ್ಪಾದನೆಯು ಶೇ 7.6ರಷ್ಟು ಕುಸಿದಿದೆ. ನೈಸರ್ಗಿಕ ಅನಿಲದ ಉತ್ಪಾದನೆಯು ಶೇ 5ರಷ್ಟು, ಕಚ್ಚಾ ತೈಲ ಉತ್ಪಾದನೆ ಶೇ 1.2ರಷ್ಟು ಕಡಿಮೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಸೂಚ್ಯಂಕವು ಹೇಳಿದೆ.

ಪೆಟ್ರೋಲಿಯಂ ಸಂಸ್ಕರಣಾಗಾರಗಳಿಂದ ಬರುವ ಉತ್ಪನ್ನಗಳ ಪ್ರಮಾಣ ಶೇ 4.6ರಷ್ಟು, ರಸಗೊಬ್ಬರ ಉತ್ಪಾದನೆ ಶೇ 7.4ರಷ್ಟು, ಉಕ್ಕು ಉತ್ಪಾದನೆ ಶೇ 6.7ರಷ್ಟು, ಸಿಮೆಂಟ್ ಉತ್ಪಾದನೆ ಶೇ 5.3ರಷ್ಟು ಹೆಚ್ಚಳ ಆಗಿದೆ.

ಕಳೆದ ವರ್ಷದ ಏಪ್ರಿಲ್‌–ಅಕ್ಟೋಬರ್‌ ಅವಧಿಯಲ್ಲಿ ಈ ಎಂಟು ವಲಯಗಳಲ್ಲಿ ಶೇ 4.3ರಷ್ಟು ಬೆಳವಣಿಗೆ ಆಗಿತ್ತು. ಆದರೆ ಈ ಬಾರಿಯ ಅಕ್ಟೋಬರ್‌ನಲ್ಲಿನ ಶೂನ್ಯ ಬೆಳವಣಿಗೆಯ ಕಾರಣದಿಂದಾಗಿ ಈ ವರ್ಷದ ಏಪ್ರಿಲ್‌–ಅಕ್ಟೋಬರ್‌ ಅವಧಿಯ ಒಟ್ಟು ಬೆಳವಣಿಗೆ ಶೇ 2.5ಕ್ಕೆ ಕುಸಿದಿದೆ.

ಕೇಂದ್ರ ಬಿಡುಗಡೆ ಮಾಡಿರುವ ದತ್ತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಅವರು, ‘ಅತಿವೃಷ್ಟಿಯು ಅಕ್ಟೋಬರ್‌ ತಿಂಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳ ಮೇಲೆ ಹಾಗೂ ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.