ADVERTISEMENT

ಉದ್ಯೋಗಕ್ಕೆ ಕತ್ತರಿ ಹಾಕಿದ ಕೊರೊನಾ: ದೇಶದಲ್ಲಿ 3.8 ಕೋಟಿ ಉದ್ಯೋಗ ನಷ್ಟ

ಪಿಟಿಐ
Published 20 ಮಾರ್ಚ್ 2020, 5:46 IST
Last Updated 20 ಮಾರ್ಚ್ 2020, 5:46 IST
ಉದ್ಯೋಗ ಅವಕಾಶಕ್ಕೆ ಕತ್ತರಿ
ಉದ್ಯೋಗ ಅವಕಾಶಕ್ಕೆ ಕತ್ತರಿ   

ನವದೆಹಲಿ/ವಿಶ್ವಸಂಸ್ಥೆ: ’ಕೊರೊನಾ–2‘ ವೈರಸ್‌ ದೇಶದಾದ್ಯಂತ ಸೃಷ್ಟಿಸಿರುವ ಆತಂಕದಿಂದಾಗಿ ಪ್ರವಾಸೋದ್ಯಮ ಮತ್ತು ಹೋಟೆಲ್‌ ಉದ್ದಿಮೆಯಲ್ಲಿ 3.8 ಕೋಟಿ ಜನರು ಉದ್ಯೋಗಕ್ಕೆ ಎರವಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರವಾಸೋದ್ಯಮ ಕಂಪನಿಗಳು ಬಾಗಿಲು ಮುಚ್ಚುತ್ತಿರುವುದರಿಂದ ಈ ಉದ್ದಿಮೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದುಡಿಯುತ್ತಿರುವ ಒಟ್ಟಾರೆ 5.5 ಕೋಟಿ ಜನರಲ್ಲಿ ಶೇ 70ರಷ್ಟು ಅಂದರೆ 3.8 ಕೋಟಿ ಜನರು ಕೆಲಸ ಕಳೆದುಕೊಳ್ಳಲಿದ್ದಾರೆ. ಉದ್ಯೋಗ ನಷ್ಟವು ಈಗಾಗಲೇ ದೇಶದಾದ್ಯಂತ ಜಾರಿಗೆ ಬರುತ್ತಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಇತರ ವಲಯಗಳಲ್ಲಿನ ಆರ್ಥಿಕ ಚಟುವಟಿಕೆಗಳು ಗಂಡಾಂತರಕ್ಕೆ ಸಿಲುಕಿವೆ ಎಂದು ಭಾರತೀಯ ಪ್ರವಾಸೋದ್ಯಮ ಹಾಗೂ ಹೋಟೆಲ್‌ ಸಂಘಗಳ ಒಕ್ಕೂಟವು (ಎಫ್‌ಎಐಟಿಎಚ್‌) ತಿಳಿಸಿದೆ.

ವರಮಾನ ಕಡಿಮೆಯಾಗುತ್ತಿರುವುದರಿಂದ ದುಡಿಯುವ ಬಂಡವಾಳ ಕರಗುತ್ತಿದೆ. ವೇತನ, ಮುಂಗಡ ತೆರಿಗೆ ಪಾವತಿ, ಭವಿಷ್ಯ ನಿಧಿ (ಪಿಎಫ್‌), ಉದ್ಯೋಗಿಗಳ ವಿಮೆ ಕಂತು (ಇಎಸ್‌ಐಸಿ), ಜಿಎಸ್‌ಟಿ, ಬ್ಯಾಂಕ್‌ ಖಾತರಿ, ಭದ್ರತಾ ಠೇವಣಿ ಮತ್ತು ಸಾಲದ ಕಂತು ಪಾವತಿಗೆ ಹಣ ಹೊಂದಿಸುವುದು ಕಷ್ಟವಾಗುತ್ತಿರುವುದನ್ನು ಒಕ್ಕೂಟವು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದೆ.

ADVERTISEMENT

ಉದ್ದಿಮೆಯ ರಕ್ಷಣೆಗೆ ಸರ್ಕಾರ ಧಾವಿಸಬೇಕು. ಶಾಸನಬದ್ಧ ಪಾವತಿಗಳಿಗೆ ಒಂದು ವರ್ಷದ ಬಿಡುವು ಘೋಷಿಸಬೇಕು. ಉದ್ದಿಮೆಯು ದಿವಾಳಿ ಅಂಚಿಗೆ ತಲುಪುವುದನ್ನು ತಡೆಯಲು ಬಡ್ಡಿ ವಿನಾಯ್ತಿಯ ದುಡಿಯುವ ಬಂಡವಾಳದ ಮಿತಿ ಹಾಗೂ ಜಾಮೀನುರಹಿತ ಸಾಲ ಒದಗಿಸಬೇಕು. ಉದ್ಯೋಗಿಗಳಿಗೆ 12 ತಿಂಗಳವರೆಗೆ ಮೂಲ ವೇತನ ನೀಡಲು ನೆರವು ನಿಧಿ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ಒಕ್ಕೂಟವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

ವಿಶ್ವದಲ್ಲೂ ಉದ್ಯೋಗ ನಷ್ಟ
ಕೊರೊನಾ ಪಿಡುಗು ಸೃಷ್ಟಿಸಿರುವ ಆರ್ಥಿಕ ಮತ್ತು ಉದ್ಯೋಗ ಬಿಕ್ಕಟ್ಟಿನ ಫಲವಾಗಿ ವಿಶ್ವದಾದ್ಯಂತ 2.5 ಕೋಟಿ ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು (ಐಎಲ್‌ಒ) ಅಂದಾಜಿಸಿದೆ.

2008 –09ರಲ್ಲಿ ಉದ್ಭವಿಸಿದ್ದ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ವಿಶ್ವ ಸಮುದಾಯವು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಯಶಸ್ವಿಯಾದಂತೆ ಈ ಬಾರಿಯೂ ಪರಸ್ಪರ ಸಹಕರಿಸಿದರೆ ಜಾಗತಿಕ ಉದ್ಯೋಗ ಮಾರುಕಟ್ಟೆ ಮೇಲೆ ಆವರಿಸಿರುವ ಆತಂಕವನ್ನು ದೂರ ಮಾಡಬಹುದಾಗಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಕಾರ್ಮಿಕರ ಹಿತರಕ್ಷಣೆ, ಆರ್ಥಿಕತೆಗೆ ಉತ್ತೇಜನ, ಉದ್ಯೋಗಿಗಳಿಗೆ ಬೆಂಬಲ ನೀಡಲು ತಕ್ಷಣಕ್ಕೆ ಕೈಗೊಳ್ಳುವ ಜಾಗತಿಕ ಸಮುದಾಯದ ಕ್ರಮಗಳಲ್ಲಿ ಸಮನ್ವಯತೆ ಕಂಡುಬರಬೇಕಾಗಿದೆ. ಸಂಬಳ ಸಹಿತ ರಜೆ, ಸಣ್ಣ (ಎಂಎಸ್‌ಎಂಇ) ಉದ್ದಿಮೆಗಳಿಗೆ ಹಣಕಾಸು ಮತ್ತು ತೆರಿಗೆ ಪರಿಹಾರ ನೀಡಬೇಕು ಎಂದು ‘ಐಎಲ್‌ಒ’ ಸಲಹೆ ನೀಡಿದೆ.

ವಿತ್ತೀಯ ಕೊರತೆ ಹೆಚ್ಚಲಿದೆ
ವ್ಯಾಪಾರ, ಹೋಟೆಲ್‌, ಸಾರಿಗೆ ಮತ್ತು ಸಂವಹನದ ವಲಯಗಳ ಮೇಲಿನ ಕೊರೊನಾ ಪರಿಣಾಮದಿಂದಾಗಿ ವಿತ್ತೀಯ ಕೊರತೆ 2019–20ನೇ ಹಣಕಾಸು ವರ್ಷದಲ್ಲಿ ಶೇ 3.88ಕ್ಕೆ ಏರಿಕೆಯಾಗಲಿದೆ ಎಂದು ಎಸ್‌ಬಿಐ ಸಂಶೋಧನಾ ವರದಿ ತಿಳಿಸಿದೆ.

ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಶೇ 3.3ರಿಂದ ಶೇ 3.8ಕ್ಕೆ ಹೆಚ್ಚಿಸಿದೆ. ಆದರೆ ವೈರಸ್‌ ಸೃಷ್ಟಿಸಿರುವ ಆತಂಕದಿಂದ ಈ ಅಂದಾಜನ್ನೂ ಮೀರಲಿದೆ ಎಂದು ಹೇಳಿದೆ.

ದೇಶಿ ಅಂಕಿ ಅಂಶ
70 %: ಉದ್ಯೋಗ ನಷ್ಟ
6.23%: ಜಿಡಿಪಿಯಲ್ಲಿನ ಪ್ರವಾಸೋದ್ಯಮದ ಪಾಲು
₹ 16.91 ಲಕ್ಷ ಕೋಟಿ: ವಾರ್ಷಿಕ ವಹಿವಾಟು

****

ಜಾಗತಿಕ ಅಂಕಿ ಅಂಶ

₹ 6 ಲಕ್ಷ ಕೋಟಿಗಳಿಂದ ₹ 238 ಲಕ್ಷ ಕೋಟಿ: ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಆಗುವ ನಷ್ಟದ ಅಂದಾಜು

3.5 ಕೋಟಿ: ಆದಾಯ ಕುಸಿತ ಕಾಣಲಿರುವ ಕಾರ್ಮಿಕರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.