ADVERTISEMENT

ಮಾವು ಮಾರುಕಟ್ಟೆ; ಕಾಣದ ಸಡಗರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 3:07 IST
Last Updated 3 ಜೂನ್ 2020, 3:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಮ್ಮಲ್ಲಿ ಒಂದು ಹಣ್ಣನ್ನು ಸುಗ್ಗಿಯಾಗಿ, ಸೀಜನ್ನಾಗಿ ಸಂಭ್ರಮಿಸುವುದು ಬೇಸಿಗೆಯಲ್ಲಿ ಮಾತ್ರ. ಅದು ಮಾವಿನ ಹಣ್ಣನ್ನು. ಆದರೆ ಈ ಬಾರಿ ಬೇಸಿಗೆಯಲ್ಲಿ ಅಂಥ ಸಂಭ್ರಮ ಎಲ್ಲೂ ಕಾಣಲಿಲ್ಲ. ಕೊರೊನಾ ಭಯ ಇಲ್ಲದೆ ಎಲ್ಲವೂ ಸುಸೂತ್ರವಾಗಿದ್ದರೆ ಇಷ್ಟೊತ್ತಿಗೆ ದೇಶದಾದ್ಯಂತ ಮಾವಿನ ಹಣ್ಣಿನ ಘಮ ಹರಡಿರುತ್ತಿತ್ತು. ಬೇರೆ ಬೇರೆ ತಳಿಯ ಹಣ್ಣುಗಳನ್ನು ‌ತಿನ್ನುವ ಸಂಭ್ರಮಕ್ಕೂ ಈ ಬಾರಿ ತಡೆ ಬಿದ್ದಿದೆ.

ದೇಶಾದ್ಯಂತ ಈ ಬಾರಿ ಮಾವಿನ ಹಣ್ಣು ಮಾರುಕಟ್ಟೆಗೆ ಬಂದದ್ದೂ ಕಮ್ಮಿ, ಜನ ತಿಂದದ್ದೂ ಕಮ್ಮಿ. ವಿವಿಧ ರಾಜ್ಯಗಳ ಯಾವ ತಳಿಯೂ ಈ ವರ್ಷ ಅಷ್ಟೊಂದು ಸಮೃದ್ಧವಾಗಿ ಬೆಳೆದಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 50ರಷ್ಟು ಹಣ್ಣು ಮಾತ್ರ ಈ ಸೀಜನ್‍ನಲ್ಲಿ ಮಾರುಕಟ್ಟೆಗೆ ಬಂದಿದೆ ಎನ್ನುತ್ತಾರೆ ಬೆಳೆಗಾರರು.

ಯುಗಾದಿಯೊಂದಿಗೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾವು ಈ ಬಾರಿ ಮಾರುಕಟ್ಟೆಯಲ್ಲಿ ಹಣಿಕಿ ಹಾಕಿದ್ದೂ ತಡವಾಗಿಯೇ. ಲೆಕ್ಕಕ್ಕೆ ಏಪ್ರಿಲ್ ಮೊದಲ ವಾರದಿಂದಲೇ ಹಣ್ಣಿನ ಸೀಜನ್ ಆರಂಭವಾಗಬೇಕು. ಅಲ್ಲಿಂದ ಕಾರಹುಣ್ಣಿಮೆ (ಈ ವರ್ಷ ಜೂನ್ 5) ಅಥವಾ ಜೂನ್ ಸಾಥ್‍ವರೆಗೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನದೇ ದರ್ಬಾರ್. ಆದರೆ ಈ ಬಾರಿ ಲಾಕ್‍ಡೌನ್‍ನಿಂದ ಅಲ್ಲಲ್ಲಿ ತೋಟಗಳಲ್ಲೇ ‘ಕ್ವಾರಂಟೈನ್‌’ ಆಗಿದ್ದ ಹಣ್ಣುಗಳು ಏಪ್ರಿಲ್ ಅರ್ಧ ಕಳೆದ ನಂತರ ಊರೂರಿಗೆ ಬಂದಿವೆ. ಅಲ್ಲಿವರೆಗೆ ಹರಸಾಹಸಪಟ್ಟು ಮನೆಗೆ ಹಣ್ಣು ತಂದವರು ಮುಖ ಗಂಟಿಕ್ಕಿ ಹುಳಿ ಹಣ್ಣನ್ನೇ ಸವಿದಿದ್ದಾರೆ. ಕೆಲವೆಡೆ ಮಾರುಕಟ್ಟೆಗೆ ಹಣ್ಣು ಬಂದರೂ ಸೋಂಕಿನ ಭಯದಲ್ಲಿ ಕೊಳ್ಳುವವರು ಮುಂದೆ ಬಂದಿಲ್ಲ.

ADVERTISEMENT

ರಾಜ್ಯದಲ್ಲಿ ಅಂದಾಜು 1.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತದೆ. ಹೆಚ್ಚು ಕಮ್ಮಿ ಒಂದು ಲಕ್ಷ ರೈತರ ಬದುಕಿಗೆ ‘ಹಣ್ಣಿನ ರಾಜ’ನದ್ದೇ ಆಸರೆ. ಆಪೂಸು, ಕಲ್ಮಿ, ಬೆನ್‍ಷನ್, ಮಲ್ಲಿಕಾ, ಕೇಸರಿ, ದಶರಿ, ಮಲಗೋವಾ, ಸಿಂಧೇರಿ, ಬಾಂಬೇ ಗ್ರೀನ್, ಹಿಮಗಿರಿ ಹೀಗೆ ನೂರಾರು ತಳಿಯ ಹಣ್ಣುಗಳು ನಮ್ಮ ರಾಜ್ಯದ ತೋಟಗಳಲ್ಲಿವೆ. ರಾಜ್ಯದಲ್ಲಿ ಪ್ರತಿ ವರ್ಷ ಅಂದಾಜು 15ಲಕ್ಷ ಟನ್ ಇಳುವರಿ ಬರಬೇಕು. ಆದರೆ ಈ ವರ್ಷ ಸಂಪೂರ್ಣ ಸೀಜನ್ ಮುಗಿಯುವವರೆಗೆ ಅಬ್ಬಬ್ಬಾ ಎಂದರೂ 8 ಲಕ್ಷ ಟನ್ ಬೆಳೆ ಬರುವ ನಿರೀಕ್ಷೆ ಇದೆ.

ಕರ್ನಾಟಕವಷ್ಟೇ ಅಲ್ಲ, ಪಕ್ಕದ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಗೋವಾ, ನಮ್ಮ ದೇಶದಲ್ಲೇ ಅತಿ ಹೆಚ್ಚು ಮಾವು ಬೆಳೆಯುತ್ತಿದ್ದ ಉತ್ತರ ಪ್ರದೇಶದಲ್ಲೂಈ ಬಾರಿ ಇಳುವರಿ ಕಡಿಮೆ ಇದೆ. ಕಳೆದ ವರ್ಷದ ಅರ್ಧದಷ್ಟು ಇಳುವರಿ ಬರಬಹುದು ಎಂಬುದು ಮಾವು ಬೆಳೆಗಾರರ ನಿರೀಕ್ಷೆ. ಕಾಗೆ ಕೂರುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿ ಹೋಯ್ತು ಎನ್ನುವಂತೆ ಈ ಬಾರಿ ಮಾವಿನ ಇಳುವರಿ ಕಡಿಮೆ ಬರುವುದಕ್ಕೂ, ಹಣ್ಣಿನ ರಾಜನ ಸೀಜನ್‍ನಲ್ಲೇ ಕೊರೊನಾ ಆರ್ಭಟಿಸಿದ್ದಕ್ಕೂ ಸಮವಾಗಿದೆ. ಲಾಕ್‍ಡೌನ್ ಸಡಿಲಗೊಂಡಂತೆ ಹಣ್ಣುಗಳ ಮಾರಾಟ ಉತ್ತಮವಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಹಣ್ಣಿನ ರಾಜನಿಗೊಂದು ದಿನ

ಭಾರತ ಬಿಟ್ಟರೆ ಮಾವು ಬೆಳೆಯುವುದರಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ.ದೆಹಲಿಯಲ್ಲಿ 1987ರಿಂದ ಜುಲೈ ತಿಂಗಳಲ್ಲೇ ಅಂತರರಾಷ್ಟ್ರೀಯ ಮಾವಿನ ಹಣ್ಣಿನ ದಿನ ಆಚರಿಸಲಾಗುತ್ತಿದೆ. ಮಾರುವವರ ಮತ್ತು ಕೊಳ್ಳುವವರ ನಡುವಿನ ಸೇತುವೆ ಎನ್ನುವಂತೆ ಅದ್ಧೂರಿ ಮಾವು ಮೇಳಗಳೂ ನಡೆಯುತ್ತವೆ. ಭಾರತ, ಪಾಕಿಸ್ತಾನ ಹಾಗೂ ಫಿಲಿಪ್ಪೀನ್ಸ್‌ನ‌ಲ್ಲಿ ಮಾವು ರಾಷ್ಟ್ರೀಯ ಹಣ್ಣಾದರೆ ಬಾಂಗ್ಲಾದೇಶದಲ್ಲಿ ಮಾವಿನ ಮರವೇ ರಾಷ್ಟ್ರೀಯ ಮರವಾಗಿದೆ.

ಆನ್‍ಲೈನ್ ಮಾರಾಟ

ಕೊರೊನಾ ಸಂಕಷ್ಟದಿಂದ ಮಾವು ಬೆಳೆ ಮಾರಾಟಕ್ಕೂ ಹೊಡೆತ ಬಿದ್ದಿದೆ. ಬೆಂಗಳೂರು ನಗರದಲ್ಲಿ ಆನ್‍ಲೈನ್ ಮೂಲಕ ಹಣ್ಣುಗಳ ಮಾರಾಟ ವ್ಯವಸ್ಥೆ ಕೈಗೊಳ್ಳಲಾಗಿದೆ. karsirimangoes.karnataka.gov.in ಮೂಲಕ ಗ್ರಾಹಕರು ಆಪೂಸು, ರಸಪುರಿ, ಮಲಗೋವಾ, ಮಲ್ಲಿಕಾ ಮತ್ತಿತರ ಹಣ್ಣುಗಳನ್ನು ಮನೆಗೆ ತರಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಡಿಕೆ ಸಲ್ಲಿಸಿದ ಒಂದೆರಡು ದಿನಗಳಲ್ಲಿ ಅಂಚೆ ಮೂಲಕ ಹಣ್ಣುಗಳನ್ನು ಮನೆಗೆ ತಲುಪಿಸಲಾಗುತ್ತಿದೆ. ಆದರೆ ಶೀಲ್‍ಡೌನ್ ಆದ ಪ್ರದೇಶಗಳಲ್ಲಿರುವ ಮನೆಗಳಿಗೆ ಹಣ್ಣುಗಳನ್ನು ತಲುಪಿಸುವುದು ಕಷ್ಟವಾಗುತ್ತಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಹಣ್ಣುಗಳ ಖರೀದಿ ಮಂದವಾಗಿ ನಡೆದಿದ್ದು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಗ್ರಾಹಕರು ಪ್ರತಿ ವರ್ಷದಂತೆ ಹಣ್ಣು ಖರೀದಿಸಲು ಬರುತ್ತಿಲ್ಲ ಎಂಬುದು ಬೆಳೆಗಾರರ ಅಳಲಾಗಿದೆ.

ಬೇಡಿಕೆಯೂ ಕಮ್ಮಿ

ಪ್ರಪಂಚದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಭಾರತ, ರಫ್ತು ಮಾಡುವುದರಲ್ಲೂ ಮುಂದಿದೆ. ಪ್ರತಿ ವರ್ಷ 60ಕ್ಕೂ ಹೆಚ್ಚು ರಾಷ್ಟ್ರಗಳ ಜನತೆಗೆ ಭಾರತದ ಮಾವಿನ ಹಣ್ಣುಗಳೇ ಬೇಕು. ಈ ಬಾರಿಯೂ ಬೇರೆ ಬೇರೆ ದೇಶಗಳಿಂದ ಇಲ್ಲಿವರೆಗೆ ಎರಡು ಸಾವಿರಕ್ಕೂ ಹೆಚ್ಚು ಟನ್‍ಗಳಷ್ಟು ಬೇಡಿಕೆ ಬಂದಿದೆ. ಬೇರೆ ಬೇರೆ ದೇಶಗಳ ಬೇಡಿಕೆಯಂತೆ ಹಣ್ಣುಗಳನ್ನು ಹಾಟ್ ವಾಟರ್ ಟ್ರೀಟ್‍ಮೆಂಟ್, ಗಾಮಾ ರೇಡಿಯೇಷನ್ ಅಥವಾ ವೇಪರ್ ಹೀಟ್ ಟ್ರೀಟ್‍ಮೆಂಟ್‍ಗೆ ಒಳಪಡಿಸಿದ ನಂತರವೇ ಕಳುಹಿಸಲಾಗುತ್ತದೆ. ಈ ಬಾರಿ ವಿಶೇಷವಾಗಿ ಸ್ಯಾನಿಟೈಸ್ ಮಾಡಿದ ಹಣ್ಣುಗಳನ್ನೇ ರಫ್ತು ಮಾಡಲಾಗುತ್ತಿದೆ.

ರಾಜ್ಯದಲ್ಲಿ ಒಟ್ಟಾರೆ ಬೆಳೆದ ಹಣ್ಣಿನಲ್ಲಿ ಶೇ 10ರಷ್ಟು ಹಾನಿಯಾದರೆ ಶೇ 35ರಷ್ಟು ಹಣ್ಣಿನಿಂದ ಪಲ್ಪ್ ತಯಾರಿಸಲಾಗುತ್ತದೆ. ಇದನ್ನು 200 ಲೀಟರ್‌ ಸಾಮರ್ಥ್ಯದ ಬ್ಯಾರಲ್‍ಗಳಲ್ಲಿ ವಿದೇಶಕ್ಕೂ ಕಳುಹಿಸಲಾಗುತ್ತದೆ. ಶೇ 5ರಷ್ಟು ಹಣ್ಣಿನಿಂದ ಜ್ಯೂಸ್ ತಯಾರಿಸಿದರೆ ಶೇ 2 ರಿಂದ ಶೇ 5ರಷ್ಟು ಹಣ್ಣುಗಳು ರಫ್ತಾಗುತ್ತವೆ. ದೇಶದ ಬೇರೆ ಬೇರೆ ಭಾಗಗಳಿಗೆ ಹಣ್ಣು ಸಾಗಿಸುವಾಗಲೂ ಮುಂಜಾಗ್ರತೆ ವಹಿಸುವಂತೆ ಬೆಳೆಗಾರರಿಗೆ ತಿಳಿಸಲಾಗಿದೆ ಎನ್ನುತ್ತಾರೆ ಮ್ಯಾಂಗೋ ಬೋರ್ಡ್ ನಿರ್ದೇಶಕ ಡಾ.ನಾಗರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.