ADVERTISEMENT

ಹತ್ತಿಗೆ ಆಮದು ಸುಂಕ ವಿನಾಯಿತಿ: ಡಿ.31ರ ವರೆಗೆ ಗಡುವು ವಿಸ್ತರಣೆ

ಪಿಟಿಐ
Published 28 ಆಗಸ್ಟ್ 2025, 15:14 IST
Last Updated 28 ಆಗಸ್ಟ್ 2025, 15:14 IST
.
.   

ನವದೆಹಲಿ: ಹತ್ತಿಯನ್ನು ಸುಂಕ ಇಲ್ಲದೆ ಆಮದು ಮಾಡಿಕೊಳ್ಳಲು ಇದ್ದ ಗಡುವನ್ನು ಡಿಸೆಂಬರ್‌ 31ರ ವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ. 

ಅಮೆರಿಕದ ಶೇ 50ರಷ್ಟು ಸುಂಕವು ದೇಶದ ಜವಳಿ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಹೀಗಾಗಿ, ವಲಯಕ್ಕೆ ನೆರವು ನೀಡಲು ಅವಧಿ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ಹತ್ತಿಗಿದ್ದ ಸುಂಕ ರಹಿತ ಆಮದು ಗಡುವನ್ನು ಇತ್ತೀಚೆಗೆ, ಆಗಸ್ಟ್‌ 19ರಿಂದ ಸೆಪ್ಟೆಂಬರ್‌ 30ರ ವರೆಗೆ ವಿಸ್ತರಿಸಲಾಗಿತ್ತು. ದೇಶದ ರಫ್ತುದಾರರಿಗೆ ಬೆಂಬಲ ನೀಡಲು ಹತ್ತಿ ಆಮದಿಗೆ ಇದ್ದ ವಿನಾಯಿತಿ ಅವಧಿ ಮತ್ತೆ ವಿಸ್ತರಿಸಲಾಗಿದೆ. ಈ ಆದೇಶ ಡಿಸೆಂಬರ್ 31ರ ವರೆಗೆ ಇರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ತಿಳಿಸಿದೆ.

ADVERTISEMENT

ಅಮೆರಿಕವು, ಭಾರತದ ಜವಳಿ ಮತ್ತು ಆಭರಣ ಉದ್ಯಮಕ್ಕೆ ಅತಿದೊಡ್ಡ ಮಾರುಕಟ್ಟೆಯಾಗಿದ್ದು, 2024ರಲ್ಲಿ ಇದರ ಮೌಲ್ಯ ₹1.92 ಲಕ್ಷ ಕೋಟಿಯಾಗಿದೆ. ಅಮೆರಿಕದ ಜವಳಿ ಮಾರುಕಟ್ಟೆಯಲ್ಲಿ ಶೇ 5.8ರಷ್ಟು ಭಾರತ ಪಾಲು ಹೊಂದಿದೆ. ನಂತರದ ಸ್ಥಾನದಲ್ಲಿ ಚೀನಾ, ವಿಯೆಟ್ನಾಂ ಮತ್ತು ಬಾಂಗ್ಲಾದೇಶ ಇದೆ. 

‘ಸುಂಕ ವಿನಾಯಿತಿಯಿಂದ ದೇಶದ ಜವಳಿ ವಲಯದ ಕಂಪನಿಗಳು ಕಡಿಮೆ ದರದಲ್ಲಿ ವಿವಿಧ ದೇಶಗಳಿಂದ ಹತ್ತಿಯನ್ನು ಆಮದು ಮಾಡಿಕೊಳ್ಳಲಿವೆ. ಇದು ದೇಶೀ ಮಾರುಕಟ್ಟೆಯಲ್ಲಿ ಕಚ್ಚಾ ಹತ್ತಿಯ ಲಭ್ಯತೆಯನ್ನು ಹೆಚ್ಚಿಸಲಿದ್ದು, ಹತ್ತಿ ದರವನ್ನು ಸ್ಥಿರಗೊಳಿಸಲಿದೆ’ ಎಂದು ಭಾರತದ ಹತ್ತಿ ಸಂಘದ ಅಧ್ಯಕ್ಷ ಅತುಲ್ ಗಣತ್ರಾ  ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.