ADVERTISEMENT

ದಿಗ್ಬಂಧನ: ಲಕ್ಷಾಂತರ ಉದ್ಯೋಗ ನಷ್ಟ

ಪ್ರಜಾವಾಣಿ ವಿಶೇಷ
Published 3 ಏಪ್ರಿಲ್ 2020, 19:45 IST
Last Updated 3 ಏಪ್ರಿಲ್ 2020, 19:45 IST
   

ಬೆಂಗಳೂರು: ಕೊರೊನಾ ವೈರಸ್‌ ಪಿಡುಗಿನ ವಿರುದ್ಧದ ಸಮರದಲ್ಲಿ ದೇಶದಾದ್ಯಂತ ಜನಜೀವನ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ವಿಧಿಸಿರುವ ದಿಗ್ಬಂಧನದ ಕಾರಣಕ್ಕೆ ವಿವಿಧ ವಲಯಗಳಲ್ಲಿ ಲಕ್ಷಾಂತರ ಉದ್ಯೋಗ ನಷ್ಟ ಕಂಡು ಬರಲಿರುವ ಭೀತಿ ಎದುರಾಗಿದೆ.

ಸದ್ಯಕ್ಕೆ ಲಭ್ಯ ಇರುವ ಅಂದಾಜಿನ ಪ್ರಕಾರ, ಸಾರಿಗೆ, ಪ್ರವಾಸೋದ್ಯಮ, ಹೋಟೆಲ್‌ ಮತ್ತಿತರ ಕ್ಷೇತ್ರಗಳಲ್ಲಿ 10ರಿಂದ 12 ಲಕ್ಷದವರೆಗೆ ಉದ್ಯೋಗಿಗಳು ಕೆಲಸಕ್ಕೆ ಎರವಾಗಲಿದ್ದಾರೆ.ದಿಗ್ಬಂಧನ ತೆರವಾಗುತ್ತಿದ್ದಂತೆ ತಯಾರಿಕೆ ವಲಯದ ಉದ್ಯೋಗಿಗಳು ಕೆಲಸಕ್ಕೆ ಮರಳಲಿದ್ದಾರೆ. ಈ ವಲಯ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿನ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಮತ್ತು ವೇತನ ಕಡಿತದ ಆತಂಕ ಎದುರಿಸುತ್ತಿದ್ದಾರೆ.ಹೊಸ ನೇಮಕಾತಿಗಳನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡುವ ಸಾಧ್ಯತೆಗಳೂ ನಿಚ್ಚಳವಾಗಿವೆ.

ವಾಹನ ತಯಾರಿಕೆ ಮತ್ತು ವಾಹನ ಬಿಡಿಭಾಗ ತಯಾರಿಕೆ, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ), ಭಾರಿ ಯಂತ್ರೋಪಕರಣ ಮತ್ತು ಗೃಹೋಪಯೋಗಿ ಸಲಕರಣೆ ತಯಾರಿಕೆ ವಲಯಗಳು ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸಲಿವೆ. ಹಲವಾರು ಕ್ಷೇತ್ರಗಳಲ್ಲಿ ಭವಿಷ್ಯದ ಕುರಿತು ಅನಿಶ್ಚಿತತೆ ಮನೆ ಮಾಡಿದೆ. ಇದೇ ಕಾರಣಕ್ಕೆ ಹೋಟೆಲ್‌ ಉದ್ದಿಮೆಯಲ್ಲಿ ದುಡಿಯುತ್ತಿದ್ದ ಗುತ್ತಿಗೆ ಕೆಲಸಗಾರರನ್ನು ಕೈಬಿಡಲಾಗಿದೆ.

ADVERTISEMENT

‘ಪ್ರವಾಸ, ಸಾರಿಗೆ ಮತ್ತು ಆತಿಥ್ಯ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 2 ಕೋಟಿ ಉದ್ಯೋಗಿಗಳ ಪೈಕಿ ಶೇ 50ರಷ್ಟು ಜನರು ಉದ್ಯೋಗಕ್ಕೆ ಎರವಾಗಲಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಈ ಮೂರೂ ವಲಯಗಳಲ್ಲಿನ ವರಮಾನ ನಷ್ಟವು ₹ 1.57 ಲಕ್ಷ ಕೋಟಿಗಳಷ್ಟು ಇರಲಿದೆ ‘ ಎಂದು ಬೆಂಗಳೂರು ಚೇಂಬರ್‌ ಆಫ್‌ ಇಂಡಸ್ಟ್ರಿ ಆ್ಯಂಡ್‌ ಕಾಮರ್ಸ್‌ನ (ಬಿಸಿಐಸಿ)ಅಧ್ಯಕ್ಷ ದೇವೇಶ್‌ ಅಗರ್‌ವಾಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘40 ಲಕ್ಷ ಎಂಜಿನಿಯರ್‌ಗಳು ದುಡಿಯುತ್ತಿರುವ ಐ.ಟಿ ಕ್ಷೇತ್ರದಲ್ಲಿ ಶೇ 5ರಷ್ಟು ಉದ್ಯೋಗ ನಷ್ಟವಾಗಲಿದೆ’ ಎಂದು ಇನ್ಫೊಸಿಸ್‌ನ ಮಾಜಿ ಸಿಎಫ್‌ಒ ಟಿ. ವಿ. ಮೋಹನ್‌ದಾಸ್‌ ಪೈ ಹೇಳಿದ್ದಾರೆ.

’ವಿಮಾನ ಯಾನ, ವಾಹನ ತಯಾರಿಕೆ ಕ್ಷೇತ್ರಗಳಲ್ಲಿನ ಅಸಂಖ್ಯ ಉದ್ಯೋಗ ಅವಕಾಶಗಳೂ ಕಾಣೆಯಾಗಲಿವೆ’ ಎಂದು ಹೆಡ್‌ಹಂಟರ್ಸ್‌ನ ಸಿಇಒ ಕ್ರಿಸ್‌ ಲಕ್ಷ್ಮಿಕಾಂತ್‌ ಅಭಿಪ್ರಾಯಪಟ್ಟಿದ್ದಾರೆ.

ಅಂಕಿ ಅಂಶ

49 ಕೋಟಿ: ದೇಶದಲ್ಲಿನ ಒಟ್ಟಾರೆ ದುಡಿಯುವ ಜನಸಂಖ್ಯೆ

2 ಕೋಟಿ:ಪ್ರವಾಸ, ಸಾರಿಗೆ ಮತ್ತು ಆತಿಥ್ಯ ವಲಯಗಳಲ್ಲಿನ ಉದ್ಯೋಗಿಗಳು

40 ಲಕ್ಷ: ಐ.ಟಿ ಕ್ಷೇತ್ರದಲ್ಲಿನ ಸಾಫ್ಟ್‌ವೇರ್‌ ತಂತ್ರಜ್ಞರು

₹ 1.57 ಲಕ್ಷ ಕೋಟಿ:ಪ್ರವಾಸ, ಸಾರಿಗೆ ಮತ್ತು ಹೋಟೆಲ್‌ ವಹಿವಾಟಿನ ವಾರ್ಷಿಕ ವರಮಾನ ನಷ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.