ADVERTISEMENT

400 ಆಮ್ಲಜನಕ ಘಟಕ ಆರಂಭಿಸಲಿದೆ ಟಾಟಾ ಸಮೂಹ

ಪಿಟಿಐ
Published 5 ಮೇ 2021, 4:09 IST
Last Updated 5 ಮೇ 2021, 4:09 IST
   

ನವದೆಹಲಿ: ದೇಶದ ಅತಿದೊಡ್ಡ ಉದ್ಯಮ ಸಮೂಹಗಳಲ್ಲಿ ಒಂದಾಗಿರುವ ‘ಟಾಟಾ’, ವಿದೇಶಗಳಿಂದ ಒಟ್ಟು 60 ಕ್ರಯೋಜನಿಕ್ ಆಮ್ಲಜನಕ ಟ್ಯಾಂಕರ್‌ಗಳನ್ನು ವಿಮಾನದ ಮೂಲಕ ಭಾರತಕ್ಕೆ ತರಲಿದೆ. ಅಲ್ಲದೆ, ಆಮ್ಲಜನಕ ಉತ್ಪಾದಿಸುವ 400 ಘಟಕಗಳನ್ನು ಸಣ್ಣ ಪಟ್ಟಣಗಳಲ್ಲಿ ಆರಂಭಿಸಲಿದೆ.

ಇಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ಆಸ್ಪತ್ರೆಗಳು ಬಳಸಿಕೊಳ್ಳಬಹುದು ಎಂದು ಟಾಟಾ ಸನ್ಸ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋವಿಡ್‌ಗೆ ತುತ್ತಾಗಿರುವವರಿಗೆ ಆರೈಕೆ ಒದಗಿಸಲು ಒಟ್ಟು ಐದು ಸಾವಿರ ಹಾಸಿಗೆಗಳ ಸೌಲಭ್ಯವನ್ನು ಸಮೂಹವು ಕಲ್ಪಿಸಲಿದೆ.

ಟಾಟಾ ಸಮೂಹದ ಒಡೆತನದ ‘ಇಂಡಿಯನ್ ಹೋಟೆಲ್ಸ್‌’ನ ಕೆಲವು ಹೋಟೆಲ್‌ಗಳನ್ನು ಕೋವಿಡ್ ರೋಗಿಗಳ ಆರೈಕೆಗೆ ಬಳಸಿಕೊಳ್ಳಲಾಗುತ್ತಿದ್ದು, ಅಲ್ಲಿನ ಕೆಲವು ಸಿಬ್ಬಂದಿಗೆ ರೋಗಿಗಳನ್ನು ಆರೈಕೆ ಮಾಡುವ ತರಬೇತಿ ನೀಡಲಾಗಿದೆ. ‘ನಾವು ಪ್ರತಿದಿನ 900 ಮೆಟ್ರಿಕ್ ಟನ್ ಆಮ್ಲಜನಕ ಒದಗಿಸುತ್ತಿದ್ದೇವೆ. ಟಾಟಾ ಸ್ಟೀಲ್‌ ಕಂಪನಿಯೇ ಇಷ್ಟು ಉತ್ಪಾದನೆ ಮಾಡುತ್ತಿದೆ. ಆದರೆ, ಸಮಸ್ಯೆ ಇರುವುದು ಆಮ್ಲಜನಕದ ಸಾಗಾಟದಲ್ಲಿ. ನಮಗೆ ವಿಶೇಷವಾದ ಕ್ರಯೋಜೆನಿಕ್ ಟ್ಯಾಂಕರ್‌ಗಳು ಬೇಕು. ಅವು ನಮ್ಮಲ್ಲಿ ಇಲ್ಲ. ಅವುಗಳನ್ನು ವಿದೇಶದಿಂದ ವಿಮಾನದ ಮೂಲಕ ತರಿಸಲಾಗುತ್ತಿದೆ’ ಎಂದು ಟಾಟಾ ಸನ್ಸ್‌ನ ಹಿರಿಯ ಅಧಿಕಾರಿ ಬನ್ಮಲಿ ಅಗರವಾಲಾ ತಿಳಿಸಿದರು.

ADVERTISEMENT

ಟ್ಯಾಂಕರ್‌ಗಳನ್ನು ತರಿಸಲು ಕೇಂದ್ರ ಸರ್ಕಾರವು ಭಾರತೀಯ ವಾಯುಪಡೆಯ ವಿಮಾನ ಲಭ್ಯವಾಗುವಂತೆ ಮಾಡಿದೆ ಎಂದು ಅವರು ತಿಳಿಸಿದರು. ‘ಪ್ರತಿ ನಿಮಿಷಕ್ಕೆ ಒಂದು ಸಾವಿರ ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯದ 400 ಘಟಕಗಳನ್ನು ಸ್ಥಾಪಿಸಲಿದ್ದೇವೆ. ಅಗತ್ಯ ಕಂಡುಬಂದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಘಟಕಗಳನ್ನು ಆರಂಭಿಸಲಿದ್ದೇವೆ’ ಎಂದು ಅವರು ಹೇಳಿದರು.

ಇಂಡಿಯನ್ ಹೋಟೆಲ್ಸ್‌ ಕಂಪನಿಯು ಒಟ್ಟು 1,500 ಹಾಸಿಗೆಗಳ ಸೌಲಭ್ಯವನ್ನು ಕೋವಿಡ್ ರೋಗಿಗಳ ಆರೈಕೆಗೆ ಮೀಸಲಿಟ್ಟಿದೆ. ಟಾಟಾ ಟ್ರಸ್ಟ್ಸ್‌ ಮೂಲಕ ಹೆಚ್ಚುವರಿಯಾಗಿ 1,500 ಹಾಸಿಗೆಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ. ಟಾಟಾ ಪ್ರಾಜೆಕ್ಟ್ಸ್‌ ಮೂಲಕ 400 ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗಿದೆ.

‘ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯು 16 ನಗರಗಳಲ್ಲಿ ತಲಾ 100 ಹಾಸಿಗೆಗಳ, ಆಮ್ಲಜನಕದ ವ್ಯವಸ್ಥೆ ಇರುವ ಸೌಲಭ್ಯವನ್ನು ನಿರ್ಮಿಸಿದೆ’ ಎಂದೂ ಅವರು ಹೇಳಿದರು. ಟಾಟಾ ಸಮೂಹವು ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕಾಗಿ ಹಿಂದಿನ ವರ್ಷ ಒಟ್ಟು ₹ 1,500 ಕೋಟಿ ಮೀಸಲಿರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.