ADVERTISEMENT

ಹಣದ ಅಕ್ರಮ ವಹಿವಾಟು ನಿಯಂತ್ರಣಕ್ಕಾಗಿ ಕ್ರಿಪ್ಟೊ ಕೇಂದ್ರಗಳ ನಿಯಮ ಬಿಗಿ: ಕೇಂದ್ರ

ಪಿಟಿಐ
Published 11 ಜನವರಿ 2026, 23:30 IST
Last Updated 11 ಜನವರಿ 2026, 23:30 IST
   

ನವದೆಹಲಿ: ಡಿಜಿಟಲ್ ಆಸ್ತಿಗಳ ಮಾರುಕಟ್ಟೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರದ ವಿತ್ತೀಯ ಗುಪ್ತದಳವು (ಎಫ್‌ಐಯು) ಕಠಿಣ ನಿಯಮಗಳನ್ನು ಅನಾವರಣ ಮಾಡಿದೆ.

ಹಣದ ಅಕ್ರಮ ವರ್ಗಾವಣೆ ತಡೆಯುವ ಉದ್ದೇಶದ ಹಾಗೂ ಕೆವೈಸಿ (ಗ್ರಾಹಕರಿಗೆ ಸಂಬಂಧಿಸಿದ ಅಗತ್ಯ ಮಾಹಿತಿ ಕಲೆಹಾಕುವುದು) ಪ್ರಕ್ರಿಯೆಗಳ ಕುರಿತಾದ ನಿಯಮಗಳು ಇವು. ಕ್ರಿಪ್ಟೊ ಕರೆನ್ಸಿ ವಿನಿಮಯ ಸೇವೆಗಳನ್ನು ಒದಗಿಸುವವರು ಇವುಗಳನ್ನು ಪಾಲಿಸಬೇಕಿದೆ.

ಪರಿಷ್ಕೃತ ನಿಯಮಗಳನ್ನು ಜನವರಿ 8ರಂದು ಹೊರಡಿಸಲಾಗಿದೆ. ಇವು ಕ್ರಿಪ್ಟೊ ವಿನಿಮಯ ಕೇಂದ್ರಗಳನ್ನು ‘ವಾಸ್ತವೋಪಮ ಡಿಜಿಟಲ್ ಆಸ್ತಿ (ವಿಡಿಎ) ಸೇವಾದಾತರು’ ಎಂದು ಗುರುತಿಸಿದೆ. ನಿಯಮಗಳ ಪ್ರಕಾರ ಇವರು ಸರಳವಾದ ಕೆಲವು ದಾಖಲೆಪತ್ರಗಳನ್ನು ಗ್ರಾಹಕರಿಂದ ಪಡೆಯುವುದಷ್ಟೇ ಅಲ್ಲದೆ, ಇನ್ನೂ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.

ADVERTISEMENT

ವಿನಿಮಯ ಕೇಂದ್ರಗಳ ಸೇವೆಯನ್ನು ಪಡೆಯಲು ಮುಂದಾಗುವ ಗ್ರಾಹಕರು ತಮ್ಮ ಸೆಲ್ಫಿಯನ್ನು ಕ್ಲಿಕ್ಕಿಸಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ. ಕ್ಯಾಮೆರಾ ಕಣ್ಣಿನ ಆಚೆಯಲ್ಲಿ ಗ್ರಾಹಕ ನಿಜಕ್ಕೂ ನಿಂತಿದ್ದಾನೆ ಎಂಬುದನ್ನು ತಂತ್ರಾಂಶವು ಆತನ ಕಣ್ಣುರೆಪ್ಪೆಗಳ ಚಲನೆ ಅಥವಾ ತಲೆಯ ಚಲನೆಯ ಮೂಲಕ ಗುರುತಿಸುತ್ತದೆ. ಈ ಪ್ರಕ್ರಿಯೆಯನ್ನು ಅನುಸರಿಸುವುದರಿಂದಾಗಿ ಭಾವಚಿತ್ರ ಅಥವಾ ಡೀಪ್‌ಫೇಕ್‌ ಚಿತ್ರ ಬಳಸಿ ವಂಚನೆ ಎಸಗುವುದನ್ನು ತಡೆಯಲು ಸಾಧ್ಯವಾಗುತ್ತದೆ.

ಬಿಗಿ ನಿಲುವು: ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಎಫ್‌ಐಯು, ಕ್ರಿಪ್ಟೊ ಆಸ್ತಿಗಳನ್ನು ಬಳಸಿ ನಡೆಯುವ ವಹಿವಾಟುಗಳು ಇನ್ನೊಬ್ಬರಿಗೆ ಗೊತ್ತಾಗದಂತೆ ಮಾಡುವುದರ ವಿರುದ್ಧ ಕಠಿಣ ನಿಲುವು ತಾಳಿದೆ. ಕೆಲವು ಕಂಪನಿಗಳು ಷೇರುಗಳ ಮಾದರಿಯಲ್ಲಿ ಡಿಜಿಟಲ್ ಟೋಕನ್‌ಗಳನ್ನು ನೀಡುವುದನ್ನು ನಿರುತ್ತೇಜಿಸುವ ಉದ್ದೇಶವನ್ನು ನಿಯಮಗಳು ಹೊಂದಿವೆ.

ಭಾರತದಲ್ಲಿ ಕೆಲಸ ನಿರ್ವಹಿಸುತ್ತಿರುವ ಕ್ರಿಪ್ಟೊ ವಿನಿಮಯ ಕೇಂದ್ರಗಳಿಗೆ ಎಫ್‌ಐಯು ಏಕಗವಾಕ್ಷಿ ನಿಯಂತ್ರಣ ನಿಯಂತ್ರಣ ವ್ಯವಸ್ಥೆಯಂತಿದೆ. ಎಲ್ಲ ಕ್ರಿಪ್ಟೊ ವಿನಿಮಯ ಕೇಂದ್ರಗಳು ಎಫ್‌ಐಯು ಬಳಿ ನೋಂದಣಿ ಮಾಡಿಕೊಳ್ಳಬೇಕು, ಅನುಮಾನಕ್ಕೆ ಆಸ್ಪದ ನೀಡುವಂತಹ ವಹಿವಾಟುಗಳ ಬಗ್ಗೆ ಕಾಲಕಾಲಕ್ಕೆ ವರದಿ ಮಾಡಬೇಕು, ಹಣದ ಅಕ್ರಮ ವರ್ಗಾವಣೆ ತಡೆಯಲು, ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುವುದನ್ನು ತಡೆಯಲು ತಮ್ಮ ಗ್ರಾಹಕರ ದಾಖಲೆ ನಿರ್ವಹಿಸಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ.

‘ಹೆಚ್ಚಿನ ರಿಸ್ಕ್‌’ ಇರುವ ವ್ಯಕ್ತಿಗಳ ಕೆವೈಸಿ ಪರಿಷ್ಕರಣೆ ಪ್ರಕ್ರಿಯೆಯನ್ನು ಆರು ತಿಂಗಳಿಗೆ ಒಮ್ಮೆ ನಡೆಸಬೇಕು, ಇತರ ಎಲ್ಲರ ಕೆವೈಸಿ ಪರಿಷ್ಕರಣೆಯನ್ನು ವರ್ಷಕ್ಕೊಮ್ಮೆ ನಡೆಸಬೇಕು ಎಂದು ವಿನಿಮಯ ಕೇಂದ್ರಗಳಿಗೆ ಹೇಳಲಾಗಿದೆ.

ತೆರಿಗೆಗಳ್ಳರ ಸ್ವರ್ಗ ಎಂದು ಹೆಸರಾಗಿರುವ ದೇಶಗಳ ಜೊತೆ ನಂಟು ಹೊಂದಿರುವವರ, ಹೆಚ್ಚಿನ ರಿಸ್ಕ್‌ ಇರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿಚಾರವಾಗಿ ಮುಕ್ತ ಮೂಲಗಳಿಂದ ಮಾಹಿತಿ ಕಲೆಹಾಕಬೇಕು. ಎಫ್‌ಎಟಿಎಫ್‌ನ (ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್‌ ಫೋರ್ಸ್‌) ಬೂದು ಅಥವಾ ಕಪ್ಪುಪಟ್ಟಿಯಲ್ಲಿ ಇರುವ ಪ್ರದೇಶಗಳಿಗೆ ಸೇರಿದವರ, ಲಾಭದ ಉದ್ದೇಶವಿಲ್ಲದ ಸಂಘಟನೆಗಳ (ಎನ್‌ಪಿಒ), ಸರ್ಕಾರಗಳಲ್ಲಿ ಮಹತ್ವದ ಹುದ್ದೆ ಹೊಂದಿರುವ ವ್ಯಕ್ತಿಗಳ ಬಗ್ಗೆಯೂ ಹೆಚ್ಚಿನ ಮಾಹಿತಿಯನ್ನು ಒಗ್ಗೂಡಿಸಬೇಕು ಎಂದು ನಿಯಮಗಳು ಹೇಳಿವೆ.

ಷೇರುಗಳ ಬದಲು ಡಿಜಿಟಲ್ ಟೋಕನ್‌ಗಳನ್ನು ನೀಡುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಮಟ್ಟದ ಹಣದ ಅಕ್ರಮ ವರ್ಗಾವಣೆ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಹಣದ ನೆರವು ಒದಗಿಸುವ ಆಯಾಮಗಳೂ ಇರುತ್ತವೆ. ಹೀಗೆ ಡಿಜಿಟಲ್ ಟೋಕನ್ ನೀಡುವುದನ್ನು ಸಮರ್ಥಿಸಿಕೊಳ್ಳಲು ಆರ್ಥಿಕ ತರ್ಕ ಇರುವುದಿಲ್ಲ ಎಂದು ನಿಯಮಗಳಲ್ಲಿ ಹೇಳಲಾಗಿದೆ.

ವಿನಿಮಯ ಕೇಂದ್ರಗಳು ಗ್ರಾಹಕರ ಗುರುತು, ವಿಳಾಸ ಮತ್ತು ವಹಿವಾಟಿನ ವಿವರವನ್ನು ಕನಿಷ್ಠ ಐದು ವರ್ಷಗಳವರೆಗೆ ಹಾಗೇ ಇರಿಸಬೇಕು, ತನಿಖೆ ನಡೆಯುತ್ತಿದ್ದರೆ ಅದು ಪೂರ್ಣಗೊಳ್ಳುವವರೆಗೆ ಉಳಿಸಿಕೊಳ್ಳಬೇಕು ಎಂದು ನಿಯಮಗಳಲ್ಲಿ ತಾಕೀತು ಮಾಡಲಾಗಿದೆ.

ಬಿಗಿ ನಿಯಮಗಳು

* ಬಳಕೆದಾರರು ತಮ್ಮ ಖಾತೆಯನ್ನು ತೆರೆಯಲು ಆರಂಭಿಸಿದ ಸ್ಥಳದ ನಿರ್ದಿಷ್ಟವಾದ ಅಕ್ಷಾಂಶ ಮತ್ತು ರೇಖಾಂಶದ ವಿವರ, ದಿನಾಂಕ, ಐ.‍ಪಿ. ವಿಳಾಸವನ್ನು ವಿನಿಮಯ ಕೇಂದ್ರಗಳು ದಾಖಲಿಸಿಕೊಳ್ಳಬೇಕು.

* ಗ್ರಾಹಕನ ಖಾತೆಗೆ ಒಂದು ರೂಪಾಯಿ ವರ್ಗಾವಣೆ ಮಾಡಿ, ಗ್ರಾಹಕ ನೀಡಿರುವ ಬ್ಯಾಂಕ್‌ ಖಾತೆಯು ಸಕ್ರಿಯವಾಗಿದೆ ಹಾಗೂ ಅದು ಆ ಗ್ರಾಹಕನಿಗೇ ಸೇರಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

* ಪ್ರಾಥಮಿಕ ದಾಖಲೆಯಾಗಿ ಪ್ಯಾನ್‌ ಸಂಖ್ಯೆ ನೀಡುವುದಷ್ಟೇ ಅಲ್ಲದೆ, ಗ್ರಾಹಕರು ಪಾಸ್‌ಪೋರ್ಟ್‌, ಆಧಾರ್‌ ಸಂಖ್ಯೆ ಅಥವಾ ಮತದಾರರ ಗುರುತಿನ ಚೀಟಿಯನ್ನು ಎರಡನೆಯ ದಾಖಲೆಯಾಗಿ ಒದಗಿಸಬೇಕು. ಒಟಿಪಿ ದೃಢೀಕರಿಸಲು ಇ–ಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆ ನೀಡಬೇಕು.

* ವಿನಿಮಯ ಕೇಂದ್ರದ ಗ್ರಾಹಕನಾಗಿ ಹೆಸರು ನೋಂದಾಯಿಸಿಕೊಳ್ಳುವ ವ್ಯಕ್ತಿಯೇ ನಂತರ ಅದರ ಅ‍ಪ್ಲಿಕೇಷನ್‌ ಬಳಕೆ ಮಾಡುತ್ತಾನೆ, ಖಾತೆ ತೆರೆಯುವ ‍ಪ್ರಕ್ರಿಯೆಯನ್ನು ಆತ ತಾನೇ ಖುದ್ದಾಗಿ ಆರಂಭಿಸಿದ್ದಾನೆ ಎಂಬುದನ್ನು ಕೂಡ ವಿನಿಮಯ ಕೇಂದ್ರಗಳು ಖಾತರಿಪಡಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.