ADVERTISEMENT

ಮೂರು ತಿಂಗಳಲ್ಲಿ 847 ಕೆ.ಜಿ ಚಿನ್ನ ಜಪ್ತಿ: ನಿರ್ಮಲಾ ಸೀತಾರಾಮನ್‌

ಪಿಟಿಐ
Published 30 ಜುಲೈ 2024, 23:36 IST
Last Updated 30 ಜುಲೈ 2024, 23:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಕಸ್ಟಮ್ಸ್‌ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ದೇಶದಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜೂನ್‌ವರೆಗೆ ಕಳ್ಳಸಾಗಣೆ ಮಾಡುತ್ತಿದ್ದ ₹544 ಕೋಟಿ ಮೌಲ್ಯದ 847 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಿದ್ದಾರೆ.

‘ಈ ಮೂರು ತಿಂಗಳ ಅವಧಿಯಲ್ಲಿ ವಿಮಾನ ನಿಲ್ದಾಣಗಳು ಮತ್ತು ಬಂದರು ಪ್ರದೇಶದಲ್ಲಿ ಚಿನ್ನ ಕಳ್ಳಸಾಗಣೆ ಸಂಬಂಧ 1,282 ಪ್ರಕರಣ ದಾಖಲಿಸಲಾಗಿದೆ. ತ‍‍ಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಮಂಗಳವಾರ ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ADVERTISEMENT

2023–24ರಲ್ಲಿ ಬಂದರುಗಳಲ್ಲಿ ಹಳದಿ ಲೋಹದ ಕಳ್ಳಸಾಗಣೆ ಮಾಡುತ್ತಿದ್ದ ಎರಡು ಪ್ರಕರಣ ಪತ್ತೆ ಹಚ್ಚಿದ್ದು, 1.28 ಕೆ.ಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್‌ನಿಂದ ಜೂನ್‌ವರೆಗೆ ಬಂದರಿನಲ್ಲಿ ಯಾವುದೇ ಕಳ್ಳಸಾಗಣೆ ಪ್ರಕರಣ ವರದಿಯಾಗಿಲ್ಲ ಎಂದು  ತಿಳಿಸಿದ್ದಾರೆ.

ಕಸ್ಟಮ್ಸ್‌ ಮತ್ತು ಡಿಆರ್‌ಐ ಅಧಿಕಾರಿಗಳು ಚಿನ್ನ ಕಳ್ಳಸಾಗಣೆ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ನೆಟ್ಟಿದ್ದಾರೆ. ಗುಪ್ತಚರ ವಿಭಾಗದ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಪ್ರಯಾಣಿಕರ ಆಗಮನ ಮತ್ತು ನಿರ್ಗಮನದ ಮಾಹಿತಿ ಆಧರಿಸಿ ಅವರ ಚಲನವಲನದ ಮೇಲೆ ಕಣ್ಗಾವಲು ಇಡುವ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಮಾನಗಳಲ್ಲಿ ಪ್ರಯಾಣಿಕರ ಸಾಮಾನು ಸರಂಜಾಮು ತಪಾಸಣೆ ನಡೆಸಲಾಗುತ್ತಿದೆ. ಹಡಗುಗಳ ಕಂಟೈನರ್‌ಗಳನ್ನು ಸ್ಕ್ಯಾನಿಂಗ್‌ ಮಾಡಲಾಗುತ್ತದೆ. ದೇಶದಲ್ಲಿ ಕಳ್ಳಸಾಗಣೆ ತಡೆಗೆ ಅಗತ್ಯ ಕ್ರಮವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಏಪ್ರಿಲ್‌ನಿಂದ ಜೂನ್‌ವರೆಗೆ ವಿಮಾನ ನಿಲ್ದಾಣಗಳಲ್ಲಿ ಚಿನ್ನ ಕಳ್ಳಸಾಗಣೆಯ 132 ಪ್ರಕರಣ ಪತ್ತೆ ಹಚ್ಚಿದ್ದು, ಇದರಲ್ಲಿ ಭಾಗಿಯಾದ 152 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ.

2023–24ರಲ್ಲಿ 174 ಪ್ರಕರಣ ಪತ್ತೆ ಹಚ್ಚಿದ್ದು, 280 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜೂನ್‌ ತ್ರೈಮಾಸಿಕದಲ್ಲಿ ಕುಗ್ಗಿದ ಬೇಡಿಕೆ

ಮುಂಬೈ: ದೇಶದ ಚಿನ್ನದ ಬೇಡಿಕೆಯು ಪ್ರಸಕ್ತ ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಶೇ 5ರಷ್ಟು ಇಳಿಕೆಯಾಗಿದೆ ಎಂದು ವಿಶ್ವ ಚಿನ್ನ ಮಂಡಳಿಯ (ಡಬ್ಲ್ಯುಜಿಸಿ) ವರದಿ ಮಂಗಳವಾರ ತಿಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 158 ಟನ್‌ನಷ್ಟು ಚಿನ್ನದ ಬೇಡಿಕೆಯಿತ್ತು. ಈ ತ್ರೈಮಾಸಿಕದಲ್ಲಿ 149 ಟನ್‌ಗೆ ಇಳಿದಿದೆ.  ‘ಹಳದಿ ಲೋಹದ ಧಾರಣೆ ಏರಿಕೆಯಿಂದಾಗಿ ಗ್ರಾಹಕರಿಂದ ಖರೀದಿಯು ಕಡಿಮೆಯಾಯಿತು. ಇದರಿಂದ ಈ ಅವಧಿಯಲ್ಲಿ ಬೇಡಿಕೆಯು ತಗ್ಗಿದೆ. ಆದರೆ ಮೌಲ್ಯದ ಲೆಕ್ಕಾಚಾರದಲ್ಲಿ ಏರಿಕೆಯಾಗಿದೆ’ ಎಂದು ಡಬ್ಲ್ಯುಜಿಸಿಯ ಭಾರತದ ಪ್ರಾದೇಶಿಕ ಸಿಇಒ ಸಚಿನ್‌ ಜೈನ್‌ ಹೇಳಿದ್ದಾರೆ. ಆಮದು ಹೆಚ್ಚಳ: ಕಳೆದ ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ 182 ಟನ್‌ನಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. ಈ ವರ್ಷದ ಇದೇ ಅವಧಿಯಲ್ಲಿ 196 ಟನ್‌ ಆಮದು ಮಾಡಿಕೊಳ್ಳಲಾಗಿದೆ. ಒಟ್ಟಾರೆ ಶೇ 8ರಷ್ಟು ಹೆಚ್ಚಳವಾಗಿದೆ. ಈ ವರ್ಷದ ಚಿನ್ನದ ಬೇಡಿಕೆಯು 700 ಟನ್‌ನಿಂದ 750 ಟನ್‌ ಆಗುವ ನಿರೀಕ್ಷೆ ಇದೆ.

10 ಗ್ರಾಂಗೆ ₹550 ಏರಿಕೆ

ನವದೆಹಲಿ: ದೇಶೀಯ ಆಭರಣ ತಯಾರಿಕರಿಂದ ಹೆಚ್ಚಿದ ಬೇಡಿಕೆಯಿಂದಾಗಿ ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನದ ಧಾರಣೆಯು ಏರಿಕೆಯಾಗಿದೆ.  10 ಗ್ರಾಂ ಚಿನ್ನದ ಬೆಲೆ ₹550 ಏರಿಕೆಯಾಗಿದ್ದು ₹71600ರಂತೆ ಮಾರಾಟವಾಗಿದೆ. ಬೆಳ್ಳಿ ದರವು ಯಥಾಸ್ಥಿತಿಯಲ್ಲಿದ್ದು ಕೆ.ಜಿ ಬೆಳ್ಳಿ ಧಾರಣೆ ₹84500 ಆಗಿದೆ. ಬ್ಯಾಂಕ್‌ ಆಫ್‌ ಜಪಾನ್‌ ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್‌ನ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರವು ಬುಧವಾರ ಪ್ರಕಟವಾಗಲಿದೆ. ಇದು ಹಳದಿ ಲೋಹದ ಬೆಲೆಯ ಏರಿಳಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.