ನವದೆಹಲಿ: ‘ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಶೇ 20ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಇದನ್ನು ಕಡಿಮೆ ಮಾಡಲು 2025–26ನೇ ಸಾಲಿನ ಬಜೆಟ್‌ನಲ್ಲಿ ಕ್ರಮಕೈಗೊಳ್ಳಬೇಕು’ ಎಂದು ಕೇಂದ್ರ ಸರ್ಕಾರಕ್ಕೆ, ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಒತ್ತಾಯಿಸಿದೆ.
ಇಂಧನ ಬೆಲೆ ಹೆಚ್ಚಳವು ಹಣದುಬ್ಬರದ ಏರಿಕೆಗೆ ಕಾರಣವಾಗಲಿದೆ. ಕಡಿಮೆ ಅಬಕಾರಿ ಸುಂಕ ವಿಧಿಸಿದರೆ ಹಣದುಬ್ಬರವು ನಿಯಂತ್ರಣಕ್ಕೆ ಬರಲಿದೆ. ಇದರಿಂದ ಜನರ ಆದಾಯವೂ ಹೆಚ್ಚಳವಾಗಲಿದೆ ಎಂದು ಹೇಳಿದೆ.
ಚಿಲ್ಲರೆ ಮಾರಾಟದ ಪೆಟ್ರೋಲ್ ಮೇಲೆ ಶೇ 21ರಷ್ಟು ಹಾಗೂ ಡೀಸೆಲ್ ಮೇಲೆ ಶೇ 18ರಷ್ಟು ಕೇಂದ್ರ ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ 40ರಷ್ಟು ಇಳಿಕೆಯಾಗಿದೆ. ಆದರೂ, 2022ರ ಮೇ ತಿಂಗಳಿನಿಂದ ಇಂಧನ ಬೆಲೆಯನ್ನು ಇಳಿಕೆ ಮಾಡಿಲ್ಲ ಎಂದು ಹೇಳಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಪಿಎಂ–ಕಿಸಾನ್ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದೆ.
2017ರಲ್ಲಿ ಪರಿಣತರ ಸಮಿತಿಯು ಕನಿಷ್ಠ ಕೂಲಿಯನ್ನು ₹267ರಿಂದ ₹375ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಿದೆ. ಕೂಲಿ ದರ ಹೆಚ್ಚಿಸಲು ಯೋಜನೆಗೆ ಹೆಚ್ಚುವರಿಯಾಗಿ ₹42 ಸಾವಿರ ಕೋಟಿ ಮೀಸಲಿಡಬೇಕು ಎಂದು ಮನವಿ ಮಾಡಿದೆ.
ಪಿಎಂ–ಕಿಸಾನ್ ಯೋಜನೆಯಡಿ ರೈತರಿಗೆ ವಾರ್ಷಿಕ ₹6 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದನ್ನು ₹8 ಸಾವಿರಕ್ಕೆ ಹೆಚ್ಚಿಸಬೇಕು. ಇದಕ್ಕಾಗಿ ಹೆಚ್ಚುವರಿಯಾಗಿ ₹20 ಸಾವಿರ ಕೋಟಿ ಮೀಸಲಿಡಬೇಕು ಎಂದು ಕೋರಿದೆ.
ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಡಿ ಅಮೌಖಿಕ ಮೌಲ್ಯಮಾಪನ (ಫೇಸ್‌ಲೆಸ್ ಅಸೆಸ್‌ಮೆಂಟ್) ವ್ಯವಸ್ಥೆಯನ್ನು ಪರಿಚಯಿಸಬೇಕು ಎಂದು ಒತ್ತಾಯಿಸಿದೆ.
‘ಸರಕು ಮತ್ತು ಸೇವೆಯ ಬಳಕೆ ವೆಚ್ಚವು ಆರ್ಥಿಕ ಬೆಳವಣಿಗೆಗೆ ನಿರ್ಣಾಯಕವಾಗಿದೆ. ಆದರೆ, ಹೆಚ್ಚುತ್ತಿರುವ ಹಣದುಬ್ಬರವು ಗ್ರಾಹಕರ ಖರೀದಿಸುವ ಸಾಮರ್ಥ್ಯವನ್ನು ಕುಗ್ಗಿಸಿದೆ. ಸರ್ಕಾರವು ಮಧ್ಯಪ್ರವೇಶಿಸುವ ಮೂಲಕ ಜನರ ಆದಾಯ ಹೆಚ್ಚಳಕ್ಕೆ ಪೂರಕ ಕ್ರಮಕೈಗೊಳ್ಳಬೇಕು. ಆ ಮೂಲಕ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಬೇಕು’ ಎಂದು ಸಿಐಐ ಮಹಾನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.