ADVERTISEMENT

ಎಲ್‌ವಿಬಿ–ಡಿಬಿಎಸ್ ಶುಕ್ರವಾರ ವಿಲೀನ

ಪಿಟಿಐ
Published 25 ನವೆಂಬರ್ 2020, 21:03 IST
Last Updated 25 ನವೆಂಬರ್ 2020, 21:03 IST

ನವದೆಹಲಿ: ಬಿಕ್ಕಟ್ಟಿಗೆ ಸಿಲುಕಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್‌ (ಎಲ್‌ವಿಬಿ), ಡಿಬಿಎಸ್‌ ಬ್ಯಾಂಕ್‌ ಜೊತೆ ಶುಕ್ರವಾರ ವಿಲೀನ ಆಗಲಿದೆ. ಇದರ ಪರಿಣಾಮವಾಗಿ ಎಲ್‌ವಿಬಿ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳು ತೆರವಾಗಲಿವೆ. ಠೇವಣಿದಾರರು ₹ 25 ಸಾವಿರ ಮಾತ್ರ ಹಿಂಪಡೆಯಬಹುದು ಎಂಬ ನಿಯಮ ಇಲ್ಲವಾಗಲಿದೆ.

ಎಲ್‌ವಿಬಿ ಮತ್ತು ಡಿಬಿಎಸ್‌ ಬ್ಯಾಂಕ್‌ ಇಂಡಿಯಾ ಲಿಮಿಟೆಡ್‌ನ ವಿಲೀನ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ ತಕ್ಷಣ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈ ಎರಡು ಬ್ಯಾಂಕ್‌ಗಳ ವಿಲೀನ ಯಾವತ್ತಿನಿಂದ ಯಾರಿಗೆ ಬರುತ್ತದೆ ಎಂಬುದನ್ನು ಪ್ರಕಟಿಸಿದೆ. ಶುಕ್ರವಾರದಿಂದ ಜಾರಿಗೆ ಬರುವಂತೆ, ಎಲ್‌ವಿಬಿಯ ಅಷ್ಟೂ ಶಾಖೆಗಳು ಡಿಬಿಎಸ್‌ ಬ್ಯಾಂಕ್‌ನ ಶಾಖೆಗಳಾಗಿ ಕೆಲಸ ನಿರ್ವಹಿಸಲಿವೆ ಎಂದು ಆರ್‌ಬಿಐ ತಿಳಿಸಿದೆ.

‘ಶುಕ್ರವಾರದಿಂದ ಜಾರಿಗೆ ಬರುವಂತೆ, ಎಲ್‌ವಿಬಿ ಗ್ರಾಹಕರು ಡಿಬಿಎಸ್ ಬ್ಯಾಂಕ್‌ನ ಗ್ರಾಹಕರಾಗಿ ತಮ್ಮ ಖಾತೆಗಳನ್ನು ನಿರ್ವಹಿಸಬಹುದು. ಹಾಗೆಯೇ, ಶುಕ್ರವಾರದಿಂದ ಎಲ್‌ವಿಬಿ ಮೇಲಿನ ನಿರ್ಬಂಧಗಳು ಇರುವುದಿಲ್ಲ’ ಎಂದು ಕೂಡ ಆರ್‌ಬಿಐ ಹೇಳಿದೆ. ಎಲ್‌ವಿಬಿ ಗ್ರಾಹಕರಿಗೆ ಎಲ್ಲ ಬಗೆಯ ಸೇವೆಗಳನ್ನು ಒದಗಿಸಲು ಡಿಬಿಎಸ್‌ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಆರ್‌ಬಿಐ ಹೇಳಿದೆ.

ADVERTISEMENT

ಎಲ್‌ವಿಬಿ ವಹಿವಾಟುಗಳ ಮೇಲೆ ನವೆಂಬರ್‌ 17ರಂದು ನಿರ್ಬಂಧ ವಿಧಿಸಿದ್ದ ಕೇಂದ್ರ ಸರ್ಕಾರವು, ಅದರ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್‌ ಮಾಡಿತ್ತು. ಎಲ್‌ವಿಬಿಯ ಅಷ್ಟೂ ನೌಕರರು ಕರ್ತವ್ಯದಲ್ಲಿ ಮುಂದುವರಿಯಲಿದ್ದಾರೆ. ಎಲ್‌ವಿಬಿ ಗ್ರಾಹಕರ ಸಂಖ್ಯೆ 20 ಲಕ್ಷ.

ವಿ.ಎಸ್‌.ಎನ್‌. ರಾಮಲಿಂಗ ಚೆಟ್ಟಿಯಾರ್‌ ನೇತೃತ್ವದಲ್ಲಿ ಏಳು ಮಂದಿಯಿಂದ, ತಮಿಳುನಾಡಿನ ಕರೂರಿನಲ್ಲಿ ಸ್ಥಾಪನೆಯಾಗಿದ್ದ ಎಲ್‌ವಿಬಿ ಈಗ 566 ಶಾಖೆಗಳನ್ನು ಹಾಗೂ 918 ಎಟಿಎಂ ಕೇಂದ್ರಗಳನ್ನು ಹೊಂದಿದೆ. 19 ರಾಜ್ಯಗಳಲ್ಲಿ, ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಈ ಬ್ಯಾಂಕ್‌ನ ವಹಿವಾಟುಗಳು ವಿಸ್ತರಿಸಿಕೊಂಡಿವೆ.

ಈ ವರ್ಷದಲ್ಲಿ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದ ಎರಡನೆಯ ಬ್ಯಾಂಕ್‌ ಎಲ್‌ವಿಬಿ. ಈ ಮೊದಲು ಯೆಸ್ ಬ್ಯಾಂಕ್‌ ಕೂಡ ಬಿಕ್ಕಟ್ಟಿಗೆ ಸಿಲುಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.