ADVERTISEMENT

ಡೆಟ್‌ ಫಂಡ್‌ ಆಕರ್ಷಣೆ ತಗ್ಗದು

ತೆರಿಗೆ ಲೆಕ್ಕಾಚಾರ ಬದಲಾವಣೆ: ಮಾರುಕಟ್ಟೆ ತಜ್ಞರ ಅಭಿಪ್ರಾಯ

ವಿಶ್ವನಾಥ ಎಸ್.
Published 1 ಏಪ್ರಿಲ್ 2023, 19:22 IST
Last Updated 1 ಏಪ್ರಿಲ್ 2023, 19:22 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಡೆಟ್‌ ಮ್ಯೂಚುವಲ್‌ ಫಂಡ್‌ಗಳಿಂದ ಸಿಗುವ ಲಾಭದ ತೆರಿಗೆ ಲೆಕ್ಕಾಚಾರದಲ್ಲಿ ಬದಲಾವಣೆ ತರುವ ಕೇಂದ್ರದ ನಿರ್ಧಾರವು, ಡೆಟ್‌ ಫಂಡ್‌ಗಳ ಬಗ್ಗೆ ಹೂಡಿಕೆದಾರರು ಹೊಂದಿರುವ ಆಕರ್ಷಣೆಯನ್ನು ತಗ್ಗಿಸುವುದಿಲ್ಲ ಎಂಬ ಅಭಿಪ್ರಾಯವನ್ನು ಕೆಲವು ತಜ್ಞರು ವ್ಯಕ್ತಪಡಿಸಿದ್ದಾರೆ.

‘ಇಂಡೆಕ್ಸೇಷನ್‌ ಪ್ರಯೋಜನ ಕೈಬಿಟ್ಟಮಾತ್ರಕ್ಕೆ ಡೆಟ್‌ ಫಂಡ್‌ಗಳಲ್ಲಿ ಬಂಡವಾಳ ಒಳಹರಿವಿಗೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಡೆಟ್ ಫಂಡ್‌ ಮತ್ತು ನಿಶ್ಚಿತ ಠೇವಣಿ (ಎಫ್‌.ಡಿ.) ಮಧ್ಯೆ ತೆರಿಗೆ ವಿಚಾರದಲ್ಲಿ ಸಮಾನತೆ ಮೂಡಬಹುದು. ಆದರೆ, ಇದೊಂದೇ ಕಾರಣಕ್ಕೆ ಎಫ್‌.ಡಿ.ಯು ಡೆಟ್‌ ಫಂಡ್‌ ಅನ್ನು ಮೀರಿ ಬೆಳೆಯಲಾರದು’ ಎಂದು ಎಲ್‌ಐಸಿ ಮ್ಯೂಚುವಲ್ ಫಂಡ್‌ ಅಸೆಟ್‌ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ನಿಶ್ಚಿತ ಆದಾಯ ವಿಭಾಗದ ನಿಧಿ ನಿರ್ವಾಹಕ ಸಂಜಯ್‌ ಪವಾರ್‌ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದ್ದಾರೆ.

‘ಏಕೆಂದರೆ, ಡೆಟ್‌ ಫಂಡ್‌ ಉತ್ಪನ್ನಗಳು ಸರಳವಾಗಿವೆ, ಇಲ್ಲಿ ನಿತ್ಯವೂ ಮೌಲ್ಯ ನಿಗದಿ ಆಗುತ್ತಿರುತ್ತದೆ. ಹೀಗಾಗಿ ಡೆಟ್ ಫಂಡ್‌ಗಳು ಹೂಡಿಕೆದಾರರಿಗೆ ನೆಮ್ಮದಿ ನೀಡಲಿವೆ’ ಎಂದು ಪವಾರ್‌ ಹೇಳಿದ್ದಾರೆ.

ADVERTISEMENT

‘ಬಹುತೇಕ ಡೆಟ್‌ ಫಂಡ್‌ಗಳಲ್ಲಿ ಎಕ್ಸಿಟ್‌ ಲೋಡ್‌ (ನಿಗದಿತ ಅವಧಿಗೆ ಮೊದಲು ನಗದೀಕರಿಸಿಕೊಂಡರೆ ವಿಧಿಸುವ ವೆಚ್ಚ) ಇರುವುದಿಲ್ಲ. ಇದಲ್ಲದೆ, ಇನ್ನೂ ಹಲವು ಕಾರಣಗಳಿಂದಾಗಿ ಡೆಟ್‌ ಫಂಡ್‌ಗಳಲ್ಲಿ ಬಂಡವಾಳ ಒಳಹರಿವು ಕಡಿಮೆ ಆಗುವ ಸಾಧ್ಯತೆ ಇಲ್ಲ. ಸದ್ಯದ ಬಡ್ಡಿದರ ಹೆಚ್ಚಳದ ಪ್ರಮಾಣ ಗಮನಿಸಿದರೆ, ಬಡ್ಡಿ ಹೆಚ್ಚಳವು ಕೊನೆಯ ಹಂತ ತಲುಪಿರುವಂತೆ ಕಾಣುತ್ತಿದೆ. ಹೀಗಾಗಿ ಡೆಟ್ ಫಂಡ್‌ಗಳಲ್ಲಿ ಈಗ ಹೂಡಿಕೆ ಮಾಡುವುದರಿಂದ ಹೂಡಿಕೆಯ ಮೌಲ್ಯ ಇನ್ನಷ್ಟು ಹೆಚ್ಚಾಗಲು ಅವಕಾಶ ಇದೆ’ ಎಂದರು.

‘ಪ್ರತಿಕೂಲ ಪರಿಣಾಮ’: ‘ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆ ಪ್ರಯೋಜನಗಳು ಇಲ್ಲವಾಗುವುದರಿಂದ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಆಗಲಿದೆ’ ಎನ್ನುವುದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಅವರ ಅಭಿಪ್ರಾಯ.

‘ಡೆಟ್‌ ಫಂಡ್‌ಗಳಿಗೆ ಅಲ್ಪಾವಧಿ ಬಂಡವಾಳ ವೃದ್ಧಿ ತೆರಿಗೆ ವಿಧಿಸುವ ಪರಿಣಾಮವಾಗಿ, ಬ್ಯಾಂಕ್‌ಗಳ ನಿಶ್ಚಿತ ಠೇವಣಿಯಿಂದ (ಎಫ್‌.ಡಿ) ಬರುವ ಗಳಿಕೆಗೆ ವಿಧಿಸುವ ತೆರಿಗೆಗೆ ಇದು ಸಮನಾಗಲಿದೆ. ಇದು ಡೆಟ್‌ ಮಾರುಕಟ್ಟೆಗೆ ದೊಡ್ಡ ಪೆಟ್ಟು ನೀಡಲಿದೆ’ ಎಂದು ಅವರು ಹೇಳಿದ್ದಾರೆ.

ಪರಿಣಾಮಗಳು

l ಬ್ಯಾಂಕ್‌ ಎಫ್‌.ಡಿ.ಗಳಲ್ಲಿ ಹೆಚ್ಚಿನ ಹೂಡಿಕೆ ಆಗುವ ಸಾಧ್ಯತೆ

l ಈಕ್ವಿಟಿಗಳಲ್ಲಿ ಶೇ 35ಕ್ಕಿಂತ ಹೆಚ್ಚಿನ ಹೂಡಿಕೆ ಇರುವ ಈಕ್ವಿಟಿ ಮ್ಯೂಚುವಲ್ ಫಂಡ್‌ ಮತ್ತು ಹೈಬ್ರಿಡ್‌ ಫಂಡ್‌ಗಳು ಹೆಚ್ಚಿನ ಹೂಡಿಕೆ ಆಕರ್ಷಿಸಲಿವೆ.

l ಚಿನ್ನದ ಬಾಂಡ್‌ಗಳಲ್ಲಿ ಬಂಡವಾಳ ಒಳಹರಿವು ಹೆಚ್ಚಾಗಲಿದೆ

l ಕೇಂದ್ರಕ್ಕೆ ತೆರಿಗೆ ವರಮಾನ ಹೆಚ್ಚುವ ನಿರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.