ADVERTISEMENT

ಯಶಸ್ಸಿನತ್ತ ದೇವದಾಸಿ ಸಹಕಾರಿ ಸಂಘ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 19:30 IST
Last Updated 30 ಏಪ್ರಿಲ್ 2019, 19:30 IST
ಸಹಕಾರಿ ಸಂಘದ ನಿರ್ದೇಶಕರು
ಸಹಕಾರಿ ಸಂಘದ ನಿರ್ದೇಶಕರು   

ದೇವದಾಸಿಯರು ಸ್ವಾವಲಂಬನೆಯ ಜೀವನ ನಡೆಸುವುದಕ್ಕೆ ನೆರವಾಗಲು ಸಹಕಾರ ಸಂಘ ಸ್ಥಾಪಿಸಿ ಹಸನಾದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿರುವ ದೇವದಾಸಿ ಸಹಕಾರಿ ಸಂಘದ ಯಶೋಗಾಥೆ ಅಚ್ಚರಿ ಮೂಡಿಸುತ್ತದೆ. ಜೊತೆಗೆ ಇತರರ ಪಾಲಿಗೆ ಸ್ಫೂರ್ತಿಯನ್ನೂ ನೀಡುತ್ತದೆ. ದೇವದಾಸಿ ಅನಿಷ್ಟ ಪದ್ಧತಿಯ ವಿರುದ್ಧ ಸಂಘಟನೆ ಮಾಡಿಕೊಂಡು ಅದರ ವಿರುದ್ದ ಹೋರಾಟ ನಡೆಸಿ, ಅವರಲ್ಲಿ ಜಾಗೃತಿ ಮೂಡಿಸಿ, ಮುಖ್ಯವಾಹಿನಿಗೆ ತರುವುದರ ಜೊತೆಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲೂ ಈ ಸಂಘ ನೆರವಾಗುತ್ತಿದೆ.

ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಇಂತಹದ್ದೊಂದು ಕ್ರಾಂತಿ ನಡೆದಿದೆ. ದೇವದಾಸಿ ಹೆಣ್ಣು ಮಕ್ಕಳನ್ನು ವಿಮೋಚನೆ ಗೊಳಿಸಲಾಗಿದೆ. ಹಲವಾರು ಹೋರಾಟ ಕಾರ್ಯಕ್ರಮಗಳ ಮೂಲಕ ದೇವದಾಸಿ ಹೆಣ್ಣುಮಕ್ಕಳ ನಡುವೆ ಜಾಗೃತಿ ಮೂಡಿಸಿ ಅವರಲ್ಲಿ ಧೈರ್ಯ ತುಂಬಿ, ವಿಶ್ವಾಸದ ಮೂಲಕ ಗೌರವಯುತ ಬದುಕು ಸಾಗಿಸಲು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಶ್ರಮಿಸುತ್ತಿದೆ.

ಈ ಸಂಘದ ನೇತೃತ್ವದಲ್ಲಿ ದೇವದಾಸಿಯರಿಗೆ ಹಲವಾರು ಮದುವೆ ಮಾಡಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗಿದೆ. ಶೋಷಿತರ ಹೆಣ್ಣು ಮಕ್ಕಳನ್ನು ಕೇಂದ್ರಿಕರಿಸಿ ತಿಳುವಳಿಕೆ ನೀಡಿ ಈ ಪದ್ಧತಿಗೆ ಬಲಿಯಾಗದಂತೆ ಎಚ್ಚರವಹಿಸಲಾಗಿದೆ. ಈಗ ಅವರ ಕುಟುಂಬದ ಆರ್ಥಿಕ ಹೊರೆಯನ್ನು ಸಮರ್ಥವಾಗಿ ನಿಭಾಯಿಸಲಿಕ್ಕಾಗಿ ದೇವದಾಸಿ ಸಹಕಾರಿ ಸಂಘ ತೆರೆಯಲಾಗಿದೆ.

ADVERTISEMENT

ಈಗಾಗಲೇ ಅದಕ್ಕೆ 300 ಕ್ಕೂ ಹೆಚ್ಚು ಜನ ಷೇರುದಾರರಾಗಿದ್ದಾರೆ. ಒಬ್ಬ ಷೇರುದಾರ ₹ 575ಗಳಿಗೆ ಒಂದು ಷೇರಿನಂತೆ ಮೂರು ಷೇರುಗಳನ್ನು ಖರೀದಿಸಿದ್ದಾರೆ. ಆರಂಭಗೊಂಡ ಕೆಲವೇ ದಿನಗಳಲ್ಲಿಯೇ ₹ 6 ಲಕ್ಷಕ್ಕೂ ಹೆಚ್ಚು ಷೇರು ಬಂಡವಾಳ ಸಂಗ್ರಹಗೊಂಡಿತ್ತು. ದೇವದಾಸಿ ಹೆಣ್ಣುಮಕ್ಕಳನ್ನೇ ಕೇಂದ್ರಿಕರಿಸಿ ಈ ಸಹಕಾರ ಸಂಘ ಕಟ್ಟಲಾಗಿದೆ.

‘ಬಳ್ಳಾರಿ ಜಿಲ್ಲೆಯಲ್ಲಿಯೇ 11 ಸಾವಿರಕ್ಕೂ ಹೆಚ್ಚು ದೇವದಾಸಿ ಹೆಣ್ಣುಮಕ್ಕಳಿದ್ದಾರೆ. ಅವರೆಲ್ಲರಿಗೂ ಜಾಗೃತಿ ಮೂಡಿಸಿ ಅವರನ್ನು ಷೇರುದಾರರನ್ನಾಗಿಸಿ ಮಾಡಲಾಗುವುದು. ರಾಜ್ಯದಲ್ಲಿ 85 ಸಾವಿರಕ್ಕೂ ಹೆಚ್ಚು ದೇವದಾಸಿ ಹೆಣ್ಣುಮಕ್ಕಳಿದ್ದು ಅವರೆಲ್ಲರಿಗೂ ಈ ಸಹಕಾರಿ ಸಂಘದ ಲಾಭ ಸಿಗಲು ಶಾಖೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದು ಸಹಕಾರಿ ಸಂಘದ ಅಧ್ಯಕ್ಷೆ ಬಿ.ಮಾಳಮ್ಮ.

ಸೌಲಭ್ಯಗಳು: ಈ ಸಹಕಾರಿ ಸಂಘದ ಮೂಲಕ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ. ದೇವದಾಸಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡಲು ಅವಕಾಶ ನೀಡಲಾಗುತ್ತಿದೆ. ಊದುಬತ್ತಿ, ಮೇಣದಬತ್ತಿ, ಗೃಹಾಲಂಕಾರ ವಸ್ತುಗಳ ನಿರ್ಮಾಣಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲದ ಸೌಲಭ್ಯ ನೀಡಲಾಗುತ್ತಿದೆ.

ಎರೆಹುಳು ಸಾಕಾಣಿಕೆ, ಅಣಬೆ ಸಾಕಾಣಿಕೆ, ಕೋಳಿ ಸಾಕಾಣಿಕೆಗೆ ತರಬೇತಿ ನೀಡಿ ಸಾಲದ ಸೌಲಭ್ಯವನ್ನು ನೀಡಲಾಗುತ್ತದೆ. ಅಪೌಷ್ಟಿಕತೆಯಿಂದ ನರಳುತ್ತಿರುವ ದೇವದಾಸಿ ಹೆಣ್ಣು ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವುದಕ್ಕಾಗಿ ನ್ಯಾಯ ಬೆಲೆ ಅಂಗಡಿ ತೆರೆದು ಕಡಿಮೆ ದರಕ್ಕೆ ವಿತರಿಸುವ ಯೋಜನೆಯು ಇದೆ. ದೇವದಾಸಿ ಹೆಣ್ಣು ಮಕ್ಕಳ, ಮಕ್ಕಳಿಗೆ ಶೈಕ್ಷಣಿಕ ಸಾಲ ಸೌಲಭ್ಯದ ಅವಕಾಶ ಇದೆ. ಈ ಸಹಕಾರಿ ಸಂಘದ ಮೂಲಕ ದೇವದಾಸಿಯರ ಮಕ್ಕಳಿಗಾಗಿಯೇ ಶಾಲೆ ತೆರೆಯುವ ಆಲೋಚನೆಯೂ ಇದೆ.

ಕಡಿಮೆ ಬಡ್ಡಿ
ಈ ಸಹಕಾರಿ ಸಂಘದಲ್ಲಿ ಪಡೆಯುವ ಸಾಲಕ್ಕೆ ರಾಷ್ಟ್ರೀಕೃತ ಬ್ಯಾಂಕಗಳ ನಿಯಮಗಳನ್ನೆ ಅಳವಡಿಸಿಕೊಳ್ಳಲಾಗಿದೆ. ಸುಲಭವಾಗಿ ಕಂತು ಕಟ್ಟುವ ಅವಕಾಶವನ್ನು ನೀಡಲಾಗಿದೆ. ಸಾಲ ಮರುಪಾವತಿಸಲು ಮಾಸಿಕ ಮತ್ತು ವಾರ್ಷಿಕ ಎಂಬ ಎರಡು ಕಂತಿನ ಅವಕಾಶವಿದೆ. ಉದಾಹರಣೆಗೆ ಒಬ್ಬ ಷೇರುದಾರ ₹ 10,000 ಸಾಲ ಪಡೆದರೆ ಒಂದು ತಿಂಗಳಿಗೆ ₹ 80 ಬಡ್ಡಿ, ₹ 830 ಅಸಲು ಸೇರಿ ₹ 910 ಪಾವತಿ ಮಾಡಬೇಕಾಗುತ್ತದೆ. ವಾರ್ಷಿಕ ಪಾವತಿ ಮಾಡುವವರಿಗೆ ₹ 1,500 ಬಡ್ಡಿ, ₹ 10,000 ಅಸಲು ಸೇರಿ ₹ 11,500 ಸಾಲ ಮರುಪಾವತಿ ಮಾಡಬೇಕಾಗುತ್ತದೆ.

‘ದೇವದಾಸಿ ಹೆಣ್ಣುಮಕ್ಕಳನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿ ಮಾಡುವುದೇ ನಮ್ಮ ಸಹಕಾರಿ ಸಂಘದ ಉದ್ದೇಶ’ ಎನ್ನುತ್ತಾರೆ ನಿರ್ದೇಶಕರಾದ ಬಿ. ಮಹಿಲಮ್ಮ

‘ನಮಗೆ ಈ ಸಹಕಾರಿ ಸಂಘ ನೆಮ್ಮದಿಯ ಬದುಕನ್ನು ಕಟ್ಟಿ ಕೊಡುತ್ತಿದೆ. ಸಾಮಾಜಿಕವಾಗಿ ನಮ್ಮ ಬದುಕನ್ನು ರೂಪಿಸಲು ಸಾಧ್ಯವಾಗುತ್ತಿದೆ’ ಎನ್ನುತ್ತಾರೆ ಷೇರುದಾರರಾದ ಅಂಜಿನಮ್ಮ.

ದೇವದಾಸಿ ಹೆಣ್ಣು ಮಕ್ಕಳ ವಿಮೋಚನೆಗಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಜ್ಯ ದೇವದಾಸಿ ವಿಮೋಚನಾ ಸಂಘದ ಅಧ್ಯಕ್ಷೆ ಬಿ.ಮಾಳಮ್ಮ (ಇವರು ದೇವದಾಸಿ ಅಲ್ಲ) ಅವರು ಈ ಸಹಕಾರಿ ಸಂಘದ ಮೊದಲ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. 12 ಜನ‌ ದೇವದಾಸಿ ಹೆಣ್ಣು ಮಕ್ಕಳು ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಗೌರವಯುತ ಜೀವನದ ಕಡೆ ಹೆಜ್ಜೆ ಹಾಕಬೇಕೆಂದು ಹೊರಟಿರುವ ಈ ಸಂಘದ ಸಮಾಜಮುಖಿ ಕಾಳಜಿಯು ನಿಜಕ್ಕೂ ಇತರರಿಗೆ ಮಾದರಿಯಾಗಿ ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ದೃಢವಾಗಿ ಹಾಕುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.