ADVERTISEMENT

ಡೀಸೆಲ್‌ಗೆ ಬೇಡಿಕೆ ಇಳಿಕೆ: ಕೇಂದ್ರ ಸರ್ಕಾರ

ಪರಿಸರ ಸ್ನೇಹಿ ಇಂಧನ ಬಳಕೆ ಹೆಚ್ಚಳದಿಂದ ತಗ್ಗಿದ ಬೇಡಿಕೆ ಪ್ರಮಾಣ

ಪಿಟಿಐ
Published 14 ಏಪ್ರಿಲ್ 2025, 14:09 IST
Last Updated 14 ಏಪ್ರಿಲ್ 2025, 14:09 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಡೀಸೆಲ್‌ಗೆ ಬೇಡಿಕೆಯ ಬೆಳವಣಿಗೆ ಪ್ರಮಾಣ ಇಳಿಕೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಘಟಕ (ಪಿಪಿಎಸಿ) ಸೋಮವಾರ ತಿಳಿಸಿದೆ.

ದೇಶದ ಆರ್ಥಿಕ ಪ್ರಗತಿಯು ಮಂದಗತಿಯಲ್ಲಿರುವುದು ಮತ್ತು ಪರಿಸರ ಸ್ನೇಹಿ ಇಂಧನ ಬಳಕೆ ಹೆಚ್ಚಳದಿಂದ ಕೋವಿಡ್‌ ಸಾಂಕ್ರಾಮಿಕ ನಂತರ ಡೀಸೆಲ್ ಬೇಡಿಕೆಯ ಬೆಳವಣಿಗೆ ಪ್ರಮಾಣ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ತಿಳಿಸಿದೆ. 

2022–23ರ ಆರ್ಥಿಕ ವರ್ಷದಲ್ಲಿ ಡೀಸೆಲ್‌ಗೆ ಬೇಡಿಕೆ ಶೇ 12.1ರಷ್ಟಿತ್ತು. 2023–24ರಲ್ಲಿ ಶೇ 4.3 ರಷ್ಟಿದ್ದರೆ, 2024–25ರ ಆರ್ಥಿಕ ವರ್ಷದಲ್ಲಿ ಬೇಡಿಕೆ ಪ್ರಮಾಣ ಶೇ 2ರಷ್ಟು ಮಾತ್ರ ಇದೆ. ಒಟ್ಟು 9.14 ಕೋಟಿ ಟನ್‌ನಷ್ಟಾಗಿತ್ತು ಎಂದು ತಿಳಿಸಿದೆ.

ADVERTISEMENT

ದೇಶದ ಇಂಧನ ಬಳಕೆಯಲ್ಲಿ ಡೀಸೆಲ್‌ ಶೇ 40ರಷ್ಟು ಪಾಲು ಹೊಂದಿದೆ. ಡೀಸೆಲ್‌ ಬೇಡಿಕೆಯು ಆರ್ಥಿಕ ಚಟುವಟಿಕೆಯನ್ನು ಪ್ರತಿಬಿಂಬಿಸುತ್ತದೆ. ಇತ್ತೀಚೆಗೆ ವಿದ್ಯುತ್‌ಚಾಲಿತ ವಾಹನಗಳ (ಇ.ವಿ) ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಡೀಸೆಲ್‌ ವಾಹನಗಳಿಗೆ ಬೇಡಿಕೆ ಇಳಿದಿದೆ. ಪರಿಸರ ಸ್ನೇಹಿ ಇಂಧನ ಬಳಕೆಯಿಂದ ಡೀಸೆಲ್‌ ಬೇಡಿಕೆ ಪ್ರಮಾಣ ಕಡಿಮೆ ಆಗಿದೆ ಎಂದು ತಿಳಿಸಿದೆ.

ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ವಿದ್ಯುತ್‌ಚಾಲಿತ ಬಸ್‌ಗಳು, ಇ–ಆಟೊರಿಕ್ಷಾಗಳು ಹೆಚ್ಚುತ್ತಿವೆ. ಇದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಡೀಸೆಲ್‌ ಬಳಕೆ ಕಡಿತ ಮಾಡಿದೆ. ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಬಿಗ್‌ಬಾಸ್ಕೆಟ್‌ ನಂತಹ ಕಂಪನಿಗಳು ವಸ್ತುಗಳ ಸಾಗಣೆಗೆ ವಿದ್ಯುತ್‌ಚಾಲಿತ ವಾಹನಗಳನ್ನು ಬಳಸುತ್ತಿವೆ.

ಕಳೆದ ಆರ್ಥಿಕ ವರ್ಷದಲ್ಲಿ ‍ಪೆಟ್ರೋಲ್‌ ಬಳಕೆ ಶೇ 7.5ರಷ್ಟು ಹೆಚ್ಚಳವಾಗಿ, 4 ಕೋಟಿ ಟನ್‌ನಷ್ಟಾಗಿದೆ. ಎಲ್‌ಪಿಜಿ ಬೇಡಿಕೆ ಶೇ 5.6ರಷ್ಟು ಏರಿಕೆಯಾಗಿ, 3.13 ಕೋಟಿ ಟನ್‌ ಆಗಿದೆ. ವಿಮಾನ ಇಂಧನ ಬಳಕೆ ಶೇ 9ರಷ್ಟು ಹೆಚ್ಚಳವಾಗಿದ್ದು, 90 ಲಕ್ಷ ಟನ್ ಆಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.