ADVERTISEMENT

‘ಡಿಜಿಟಲ್ ಕರೆನ್ಸಿ ವಹಿವಾಟು ಗೋಪ್ಯ’

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 20:59 IST
Last Updated 7 ಡಿಸೆಂಬರ್ 2022, 20:59 IST
A group of young people discuss the concept of central bank digital currency. Holographic futuristic screen with the inscription CBDCA group of young people discuss the concept of central bank digital currency. Holographic futuristic screen with the inscription CBDC
A group of young people discuss the concept of central bank digital currency. Holographic futuristic screen with the inscription CBDCA group of young people discuss the concept of central bank digital currency. Holographic futuristic screen with the inscription CBDC   

ಮುಂಬೈ (ರಾಯಿಟರ್ಸ್): ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್‌ ಕರೆನ್ಸಿ (ಸಿಬಿಡಿಸಿ) ಬಳಸಿ ನಡೆಯುವ ವಹಿವಾಟುಗಳು ನಿರ್ದಿಷ್ಟ ಹಂತದವರೆಗೆ ಗೋಪ್ಯವಾಗಿ ಇರುತ್ತವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಡೆಪ್ಯುಟಿ ಗವರ್ನರ್ ಟಿ. ರವಿಶಂಕರ್
ಹೇಳಿದ್ದಾರೆ.

ಸಗಟು ಹಾಗೂ ಚಿಲ್ಲರೆ ವಹಿವಾಟುಗಳಲ್ಲಿ ಡಿಜಿಟಲ್ ಕರೆನ್ಸಿಯ ಪ್ರಾಯೋಗಿಕ ಬಳಕೆಯನ್ನು ಆರ್‌ಬಿಐ ಈಗಾಗಲೇ ಆರಂಭಿಸಿದೆ. ‘ಗೋಪ್ಯತೆಯನ್ನು ಖಾತರಿಪಡಿಸಲು ಕಾನೂನಿನ ನೆರವು ಪಡೆಯಲು ಸಾಧ್ಯವಿದೆ’ ಎಂದು ಅವರು ಹಣಕಾಸು ನೀತಿ ಸಮಿತಿ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಗೋಪ್ಯತೆಯು ನಗದು ವಹಿವಾಟಿನಲ್ಲಿ ಇರುವ ಮೂಲ ಲಕ್ಷಣ. ಇದನ್ನು ನಾವು ಡಿಜಿಟಲ್ ಕರೆನ್ಸಿಯಲ್ಲಿಯೂ ಖಾತರಿಪಡಿಸಬೇಕು’ ಎಂದಿದ್ದಾರೆ. ಆದರೆ, ಸಿಬಿಡಿಸಿ ವಹಿವಾಟುಗಳು ಎಷ್ಟರಮಟ್ಟಿಗೆ ಗೋಪ್ಯವಾಗಿ ಇರುತ್ತವೆ ಎಂಬುದನ್ನು ಆರ್‌ಬಿಐ ಸ್ಪಷ್ಟಪಡಿಸಿಲ್ಲ.

ADVERTISEMENT

ಆದಾಯ ತೆರಿಗೆ ಇಲಾಖೆಯು ನಿರ್ದಿಷ್ಟ ಮೊತ್ತದವರೆಗಿನ ನಗದು ವಹಿವಾಟುಗಳನ್ನು ಯಾವುದೇ ದಾಖಲೆಪತ್ರ ಸಲ್ಲಿಸದೆಯೂ ನಡೆಸಲು ಅವಕಾಶ ನೀಡಿದೆ. ಈ ನಿಯಮಗಳೇ ಸಿಬಿಡಿಸಿ ವಹಿವಾಟಿಗೂ ಅನ್ವಯವಾಗಬಹುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಹಾಗೂ ಸಿಬಿಡಿಸಿ ಒಂದೇ ರೀತಿ ಕಾಣುತ್ತಿವೆ ಎಂಬ ಅಭಿಪ್ರಾಯವು ಕೆಲವು ಬ್ಯಾಂಕರ್‌ಗಳಿಂದಲೇ ಬಂದಿದೆ. ಆದರೆ, ಇವೆರಡೂ ಭಿನ್ನ ಎಂದು ರವಿಶಂಕರ್ ಪ್ರತಿಪಾದಿಸಿದ್ದಾರೆ.

‘ಡಿಜಿಟಲ್ ಕರೆನ್ಸಿ ವಹಿವಾಟನ್ನು ನಗದು ಪಾವತಿಗೆ ಹೋಲಿಸಬಹುದು. ಎರಡು ಖಾಸಗಿ ಸಂಸ್ಥೆಗಳು ವಾಲೆಟ್ ಸೌಲಭ್ಯ ನೀಡಿ, ಡಿಜಿಟಲ್ ಕರೆನ್ಸಿಯ ವಹಿವಾಟು ಈ ವಾಲೆಟ್‌ಗಳ ನಡುವೆ ಆಗುವಂತೆ ನೋಡಿಕೊಳ್ಳಬಹುದು. ಆದರೆ ಯುಪಿಐ ವ್ಯವಸ್ಥೆಯಲ್ಲಿ ಇದು ಸಾಧ್ಯವಿಲ್ಲ. ಯುಪಿಐ ಬಳಸಿ ವಹಿವಾಟು ನಡೆಸಲು ಬ್ಯಾಂಕ್ ಖಾತೆ ಬೇಕೇಬೇಕು’ ಎಂದು ರವಿಶಂಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.