ADVERTISEMENT

ಡಿಜಿಟಲ್‌ ಪಾವತಿಗೆ ನಂದನ್‌ ಸಮಿತಿ

ಐವರು ಸದಸ್ಯರ ಸಮಿತಿ ನೇಮಿಸಿದ ಭಾರತೀಯ ರಿಸರ್ವ್‌ ಬ್ಯಾಂಕ್

ಪಿಟಿಐ
Published 8 ಜನವರಿ 2019, 18:58 IST
Last Updated 8 ಜನವರಿ 2019, 18:58 IST
NANDAN
NANDAN   

ಮುಂಬೈ: ನಗದುರಹಿತ (ಡಿಜಿಟಲ್‌) ಪಾವತಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌, ನಂದನ್‌ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ.

ಡಿಜಿಟಲ್‌ ಪಾವತಿಯ ಸುರಕ್ಷತೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು, ಆಧಾರ್‌ನ ರೂವಾರಿ ನಂದನ್‌ ಅವರ ಅಧ್ಯಕ್ಷತೆಯಲ್ಲಿ ಐದು ಸದಸ್ಯರ ಸಮಿತಿ ಅಸ್ತಿತ್ವಕ್ಕೆ ಬರಲಿದೆ.

ನಗದುರಹಿತ ಪಾವತಿ ವಿಧಾನ ಉತ್ತೇಜಿಸುವುದು ಮತ್ತು ಇಂತಹ ಹಣ ಪಾವತಿ ವ್ಯವಸ್ಥೆ ಮೂಲಕ ಹಣಕಾಸು ಸೇರ್ಪಡೆ ಹೆಚ್ಚಿಸುವ ಉದ್ದೇಶಕ್ಕೆ ಈ ಸಮಿತಿ ರಚಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ADVERTISEMENT

ಸಮಿತಿಯು ತನ್ನ ಮೊದಲ ಸಭೆ ನಡೆಸಿದ ದಿನದಿಂದ ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿದೆ.

ಸದ್ಯಕ್ಕೆ ದೇಶದಲ್ಲಿ ಜಾರಿಯಲ್ಲಿ ಇರುವ ಡಿಜಿಟಲ್‌ ಪಾವತಿ ವ್ಯವಸ್ಥೆ, ಈ ವ್ಯವಸ್ಥೆ ಅಳವಡಿಕೆಯಲ್ಲಿ ಇರುವ ಲೋಪದೋಷಗಳು, ಈ ಸಮಸ್ಯೆಗಳನ್ನು ನಿವಾರಿಸುವ ಪರಿಹಾರೋಪಾಯಗಳು, ಹಣಕಾಸು ಸೇರ್ಪಡೆಯಲ್ಲಿ ಈ ವ್ಯವಸ್ಥೆ ನಿರ್ವಹಿಸುತ್ತಿರುವ ಪಾತ್ರದ ಮೌಲ್ಯಮಾಪನದ ಪರಾಮರ್ಶೆ ನಡೆಸಲು ಸಮಿತಿಗೆ ಸೂಚಿಸಲಾಗಿದೆ.

ಈ ವಿಧಾನದ ಸುರಕ್ಷತೆ ಹೆಚ್ಚಿಸಿ, ಬಳಕೆದಾರರಲ್ಲಿ ವಿಶ್ವಾಸ ಮೂಡಿಸುವ ಮತ್ತು ಬಳಕೆದಾರರು ಡಿಜಿಟಲ್‌ ವಿಧಾನದಲ್ಲಿಯೇ ಹಣಕಾಸು ಸೇವೆಗಳನ್ನು ಪಡೆಯುವ ವಿಧಾನಗಳ ಬಗ್ಗೆ ಸಮಿತಿಯು ಶಿಫಾರಸು ಮಾಡಲಿದೆ.

ಈ ಸೌಲಭ್ಯದ ಬಳಕೆ ಹೆಚ್ಚಿಸಲು ಕೈಗೊಳ್ಳಬೇಕಾದ ಮಧ್ಯಂತರ ಕಾರ್ಯತಂತ್ರದ ಬಗ್ಗೆಯೂ ಸಮಿತಿ ಸಲಹೆಗಳನ್ನು ನೀಡಲಿದೆ.

ಸಮಿತಿಯ ಸದಸ್ಯರು: ಇನ್ಫೊಸಿಸ್‌ನ ಸಹ ಸ್ಥಾಪಕ ನಂದನ್‌ ನಿಲೇಕಣಿ ಅವರಲ್ಲದೆ, ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್‌ ಎಚ್‌. ಆರ್‌. ಖಾನ್‌, ವಿಜಯ ಬ್ಯಾಂಕ್‌ನ ಮಾಜಿ ಸಿಇಒ ಕಿಶೋರ್‌ ಸಾನ್ಸಿ, ಐ.ಟಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಅರುಣಾ ಶರ್ಮಾ ಮತ್ತು ಐಐಐ ಅಹ್ಮದಾಬಾದ್‌ನ ಉದ್ಯಮಶೀಲತಾ ಕೇಂದ್ರದ ಮುಖ್ಯ ಸಂಶೋಧನಾ ಅಧಿಕಾರಿ ಸಂಜಯ್‌ ಜೈನ್‌ ಅವರು ಸಮಿತಿಯ ಸದಸ್ಯರಾಗಿದ್ದಾರೆ.

**

ದೇಶದ ಜನರ ಪಾಲಿಗೆ ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಹೊಸ ರೂಪ ನೀಡುವ ಸಮಿತಿಯ ಮುಖ್ಯಸ್ಥನಾಗಿ ಆರ್‌ಬಿಐ ಜತೆ ಕೆಲಸ ಮಾಡುವುದನ್ನು ಎದುರು ನೋಡುತ್ತಿರುವೆ.

-ನಂದನ್‌ ನಿಲೇಕಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.