ADVERTISEMENT

ದೇಶದಲ್ಲಿ 5.8 ಕೋಟಿ ಪಡಿತರ ಚೀಟಿ ರದ್ದು: ಕೇಂದ್ರ ಆಹಾರ ಸಚಿವಾಲಯ

ಪಿಟಿಐ
Published 20 ನವೆಂಬರ್ 2024, 15:32 IST
Last Updated 20 ನವೆಂಬರ್ 2024, 15:32 IST
ಪಡಿತರ ಚೀಟಿ (ಸಾಂಕೇತಿಕ ಚಿತ್ರ)
ಪಡಿತರ ಚೀಟಿ (ಸಾಂಕೇತಿಕ ಚಿತ್ರ)   

ನವದೆಹಲಿ: ದೇಶದಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯ (ಪಿಡಿಎಸ್) ಡಿಜಿಟಲೀಕರಣಕ್ಕೆ ಚಾಲನೆ ನೀಡಲಾಗಿದ್ದು, 5.8 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯವು ಬುಧವಾರ ತಿಳಿಸಿದೆ.

ಒಟ್ಟು 80.6 ಕೋಟಿ ಪಡಿತರ ಚೀಟಿಗಳನ್ನು ವಿತರಿಸಲಾಗಿತ್ತು. ಆಧಾರ್‌ ಸಂಖ್ಯೆ ಆಧರಿತ ದೃಢೀಕರಣ ಹಾಗೂ ಇ–ಕೆವೈಸಿ (ಆಧಾರ್‌ ಆಧರಿತ ಹೆಬ್ಬೆಟ್ಟಿನ ದೃಢೀಕರಣ) ಪರಿಶೀಲನೆ ಪ್ರಕ್ರಿಯೆ ಮೂಲಕ ಈ ನಕಲಿ ಚೀಟಿಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದ ಪಡಿತರ ವಿತರಣೆಯಲ್ಲಿನ ಸೋರಿಕೆಯನ್ನು ತಡೆಗಟ್ಟಲಾಗಿದೆ. ಜೊತೆಗೆ, ಅರ್ಹರಿಗೆ ಪಡಿತರ ಸಿಗಲು ನೆರವಾಗಿದೆ ಎಂದು ಹೇಳಿದೆ.

ಪಿಡಿಎಸ್‌ ವ್ಯವಸ್ಥೆಯ ಡಿಜಿಟಲೀಕರಣದ ಮೂಲಕ ಜಾಗತಿಕ ಮಟ್ಟದಲ್ಲಿ ಸರ್ಕಾರವು ಆಹಾರ ಭದ್ರತೆ ಕಾರ್ಯಕ್ರಮದಲ್ಲಿ ಹೊಸ ಹೆಗ್ಗುರುತು ಮೂಡಿಸಿದೆ. ಇಲ್ಲಿಯವರೆಗೆ 20.4 ಕೋಟಿ ಪಡಿತರ ಚೀಟಿಗಳ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ವಿವರಿಸಿದೆ.

ADVERTISEMENT

ಪ್ರಸ್ತುತ ದೇಶದಲ್ಲಿ ಶೇ 98ರಷ್ಟು ಪಡಿತರ ವಿತರಣೆಯು ಆಧಾರ್‌ ದೃಢೀಕರಣದ ಮೂಲಕ ನಡೆಯುತ್ತಿದೆ. ಅನರ್ಹರಿಗೆ ಆಹಾರ ಧಾನ್ಯಗಳ ವಿತರಣೆ ಹಾಗೂ ಪಡಿತರ ಕಳ್ಳತನಕ್ಕೂ ತಡೆ ಬಿದ್ದಿದೆ ಎಂದು ಹೇಳಿದೆ.

ಆಹಾರ ಭದ್ರತೆ ದೃಷ್ಟಿಯಿಂದ ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ’ಯನ್ನು ಅನುಷ್ಠಾನಗೊಳಿಸಿದೆ. ಹಾಲಿ ಇರುವ ಕಾರ್ಡ್‌ಗಳ ಮೂಲಕ ಫಲಾನುಭವಿಗಳು ದೇಶದ ಯಾವ ನ್ಯಾಯಬೆಲೆ ಅಂಗಡಿಯಲ್ಲಿ ಬೇಕಾದರೂ ಪಡಿತರ ಪಡೆಯಬಹುದಾಗಿದೆ ಎಂದು ವಿವರಿಸಿದೆ.

ಇ–ಕೆವೈಸಿ

ಒಂದು ಬಾರಿ ಪಡಿತರ ಕಾರ್ಡ್‌ನಲ್ಲಿರುವ ಕುಟುಂಬದ ಎಲ್ಲಾ ಸದಸ್ಯರು ಇ–ಕೆವೈಸಿ ಮಾಡಿಸಬೇಕಿದೆ. ಇಲ್ಲಿಯವರೆಗೆ ಈ ಪ್ರಕ್ರಿಯೆಯು ಶೇ 64ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ. ಉಳಿದವರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ದೃಢೀಕರಣ ಪ್ರಕ್ರಿಯೆ ನಡೆಯುತ್ತಿದೆ.

ಪೂರೈಕೆಗೆ ಬಲ

ದೇಶದಲ್ಲಿ ಪಡಿತರ ಪೂರೈಕೆ ವ್ಯವಸ್ಥೆಯ ಬಲವರ್ಧನೆಗೆ ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಕ್ರಮಕೈಗೊಂಡಿದೆ. ಪೂರೈಕೆ ಸರಪಳಿಯ ಸದೃಢಕ್ಕೆ ಮುಂದಾಗಿದೆ. ಆಹಾರ ಪೂರೈಸುವ ವಾಹನಗಳ ಮೇಲೆ ನಿಗಾ ಇಟ್ಟಿದೆ. ಸಕಾಲದಲ್ಲಿ ರೈಲುಗಳ ಮೂಲಕ ನಿಗದಿತ ಸ್ಥಳಗಳಿಗೆ ಆಹಾರ ಧಾನ್ಯಗಳ ರವಾನೆಗೂ ಕ್ರಮ ವಹಿಸಿದೆ ಎಂದು ಸಚಿವಾಲಯ ತಿಳಿಸಿದೆ.

ಇ–ಪಿಒಎಸ್‌

ದೇಶದಾದ್ಯಂತ 5.33 ಲಕ್ಷ ನ್ಯಾಯಬೆಲೆ ಅಂಗಡಿಗಳಲ್ಲಿ ತಂತ್ರಜ್ಞಾನ ಆಧಾರಿತ ಇ–ಪಿಒಎಸ್‌ (ಪಾಯಿಂಟ್‌ ಆಫ್‌ ಸೇಲ್‌) ಸಾಧನಗಳನ್ನು ಅಳವಡಿಸಲಾಗಿದೆ. ಇವುಗಳ ಮೂಲಕ ಪಡಿತರ ವಿತರಣೆ ವೇಳೆ ಆಧಾರ ಸಂಖ್ಯೆಯನ್ನು ದೃಢೀಕರಿಸಲಾಗುತ್ತದೆ. ಅರ್ಹ ಪಡಿತರ ಚೀಟಿದಾರರಿಗೆ ಪಡಿತರ ವಿತರಿಸಲಾಗುತ್ತಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.