ಎಲ್‌ಐಸಿ
ಬೆಂಗಳೂರು: ಸರ್ಕಾರಿ ಸ್ವಾಮ್ಯದ ಪ್ರಮುಖ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಎರಡು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳಿಗೆ (ಎಂಡಿ) ಕೇಂದ್ರ ಸರ್ಕಾರ ನೇಮಕಾತಿ ಆದೇಶ ಹೊರಡಿಸಿದೆ.
ಎಲ್‌ಐಸಿಯ ಪ್ರಸ್ತುತ ಮುಖ್ಯ ವಿಮಾ ಗಣಕ ದಿನೇಶ್ ಪಂತ್ ಹಾಗೂ ಎಲ್‌ಐಸಿಯ ಪ್ರಸ್ತುತ ಮುಖ್ಯ ಹೂಡಿಕೆ ಅಧಿಕಾರಿ ರತ್ನಾಕರ್ ಪಟ್ನಾಯಿಕ್ ಅವರನ್ನು ಎರಡು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳಿಗೆ ನೇಮಿಸಲಾಗಿದೆ.
ಇಬ್ಬರೂ ಜೂನ್ 1ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಎಲ್‌ಐಸಿ ತಿಳಿಸಿದೆ. ಈ ಕುರಿತು ಟೈಮ್ಸ್ ಆಫ್ ಇಂಡಿಯಾ.ಇಂಡಿಯಾ ಟೈಮ್ಸ್ ವೆಬ್‌ಸೈಟ್ ವರದಿ ಮಾಡಿದೆ.
ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕರಾಗಿರುವ ತಬಲೇಶ್ ಪಾಂಡೆ ಹಾಗೂ ಎಂ. ಜಗನ್ನಾಥ್ ಅವರ ಅಧಿಕಾರವಧಿ ಇದೇ ಮೇ 31ಕ್ಕೆ ಕೊನೆಗೊಳ್ಳಲಿದೆ.
ಎಲ್‌ಐಸಿಯಲ್ಲಿ ಅಧ್ಯಕ್ಷ ಮತ್ತು ಸಿಇಒ ಅವರ ಕೆಳಗೆ ನಾಲ್ವರು ವ್ಯವಸ್ಥಾಪಕ ನಿರ್ದೇಶಕರಿರುತ್ತಾರೆ ಹಾಗೂ 10 ಸ್ವತಂತ್ರ ನಿರ್ದೇಶಕರಿರುತ್ತಾರೆ. ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಲ್‌ಐಸಿ 7 ವಲಯ ಕಚೇರಿ, 100 ಪ್ರಾದೇಶಿಕ ಕಚೇರಿ ಹಾಗೂ 2000ಕ್ಕೂ ಹೆಚ್ಚು ಬ್ರ್ಯಾಂಚ್‌ಗಳನ್ನು ಹೊಂದಿದೆ.
ಪ್ರಸ್ತುತ ಸಿದ್ಧಾಂತ್ ಮೊಹಾಂತಿ ಎಲ್‌ಐಸಿ ಸಿಇಒ ಹಾಗೂ ಅಧ್ಯಕ್ಷರಾಗಿದ್ದಾರೆ. ಭಾರತ ಸರ್ಕಾರದ ಹಣಕಾಸು ಇಲಾಖೆಯ ಅಧೀನದಡಿ ಎಲ್‌ಐಸಿ ಒಂದು ನಿಗಮವಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.