ADVERTISEMENT

ದೀಪಾವಳಿ | ₹6 ಲಕ್ಷ ಕೋಟಿ ವಹಿವಾಟು: ಖರೀದಿಗೆ ಉತ್ತೇಜನ ನೀಡಿದ ಜಿಎಸ್‌ಟಿ ಇಳಿಕೆ

ಪಿಟಿಐ
Published 22 ಅಕ್ಟೋಬರ್ 2025, 0:30 IST
Last Updated 22 ಅಕ್ಟೋಬರ್ 2025, 0:30 IST
.
.   

ನವದೆಹಲಿ: ದೀಪಾವಳಿ ಹಬ್ಬದ ಅಂಗವಾಗಿ ದೇಶದಲ್ಲಿ ₹6.05 ಲಕ್ಷ ಕೋಟಿಯಷ್ಟು ದಾಖಲೆಯ ವಹಿವಾಟು ನಡೆದಿದೆ ಎಂದು ಅಖಿಲ ಭಾರತ ವರ್ತಕರ ಸಂಘದ (ಸಿಎಐಟಿ) ಸಮೀಕ್ಷೆ ಮಂಗಳವಾರ ತಿಳಿಸಿದೆ.

ಈ ಒಟ್ಟು ವಹಿವಾಟು ಪೈಕಿ ₹5.40 ಲಕ್ಷ ಕೋಟಿಯಷ್ಟು ಮೌಲ್ಯದ ಸರಕುಗಳು ಮಾರಾಟವಾಗಿದ್ದರೆ, ₹65 ಸಾವಿರ ಕೋಟಿಯಷ್ಟು ಸೇವಾ ವಲಯಕ್ಕೆ ಸಂಬಂಧಿಸಿದ ವಹಿವಾಟು ನಡೆದಿದೆ. ಜಿಎಸ್‌ಟಿ ಇಳಿಕೆ ಮತ್ತು ಗ್ರಾಹಕರಲ್ಲಿ ಹೆಚ್ಚಳವಾದ ಖರೀದಿ ಸಾಮರ್ಥ್ಯದಿಂದ ಮಾರಾಟದ ಪ್ರಮಾಣ ಹೆಚ್ಚಳವಾಗಿದೆ ಎಂದು ತಿಳಿಸಿದೆ. 

ಕಳೆದ ವರ್ಷದ ದೀ‍ಪಾವಳಿ ವೇಳೆ ₹4.25 ಲಕ್ಷ ಕೋಟಿಯಷ್ಟು ಮಾರಾಟ ನಡೆದಿತ್ತು.

ADVERTISEMENT

ಈ ಬಾರಿ ನಡೆದ ವಹಿವಾಟಿನಲ್ಲಿ ಎಫ್‌ಎಂಸಿಜಿ ವಲಯದ ಸರಕುಗಳ ಮಾರಾಟವು ಒಟ್ಟು ಮಾರಾಟದಲ್ಲಿ ಶೇ 12ರಷ್ಟು ಪಾಲು ಹೊಂದಿದೆ. ಚಿನ್ನ ಮತ್ತು ಆಭರಣಗಳು ಶೇ 10, ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕಲ್ಸ್ ವಸ್ತುಗಳು ಶೇ 8, ಸಿದ್ಧ ಉಡುಪುಗಳು ಶೇ 7, ಉಡುಗೊರೆಗಳು ಶೇ 7, ಗೃಹಾಲಂಕಾರ ವಸ್ತುಗಳು ಶೇ 5, ಪೀಠೋಪಕರಣಗಳು ಶೇ 5, ಸಿಹಿತಿಂಡಿಗಳು ಶೇ 5, ಪೂಜಾ ಸಾಮಗ್ರಿಗಳು ಶೇ 3, ಹಣ್ಣುಗಳು ಶೇ 3ರಷ್ಟು ಇದೆ. 

‘ಪ್ಯಾಕೇಜಿಂಗ್, ಆತಿಥ್ಯ, ಕ್ಯಾಬ್‌ಸೇವೆಗಳು, ಪ್ರಯಾಣ, ಈವೆಂಟ್‌ ಮ್ಯಾನೇಜ್‌ಮೆಂಟ್‌, ಆಲಂಕಾರಿಕ, ವಿತರಣೆಯಂತಹ ವಲಯಗಳಿಂದ ಸೇವಾ ವಲಯವು ಈ ಬಾರಿ ₹65 ಸಾವಿರ ಕೋಟಿ ವಹಿವಾಟು ಕಂಡಿದೆ’ ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಹೇಳಿದ್ದಾರೆ.

ದಿನನಿತ್ಯ ಬಳಸುವ ವಸ್ತುಗಳಾದ ಉಡುಪುಗಳು, ಪಾದರಕ್ಷೆ, ಗೃಹಾಲಂಕಾರ ಸೇರಿ ಇತರೆ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿಮೆ ಆಗಿದೆ. ಇದೇ ಮಾರಾಟದ ಹೆಚ್ಚಳಕ್ಕೆ ನೇರ ಕಾರಣ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ 72ರಷ್ಟು ವರ್ತಕರು ಹೇಳಿದ್ದಾರೆ.  

ಸ್ಥಿರವಾದ ಬೆಲೆಯಿಂದ ಗ್ರಾಹಕರು ಹೆಚ್ಚು ಸಂತೃಪ್ತರಾಗಿದ್ದು, ಇದು ಹಬ್ಬದ ವೇಳೆ ಜನರು ಹೆಚ್ಚು ಖರೀದಿಸಲು ಉತ್ತೇಜನ ನೀಡಿತು. ಮದುವೆಯ ಋತು, ಮುಂಬರುವ ಹಬ್ಬಗಳಿಂದ ಈ ಮಾರಾಟ ಹೆಚ್ಚಳವು ಇದೇ ರೀತಿ ಮುಂದುವರಿಯಲಿದೆ ಎಂದು ಹೇಳಿದೆ. 

ಲಾಜಿಸ್ಟಿಕ್ಸ್, ಪ್ಯಾಕೇಜಿಂಗ್‌, ಸಾರಿಗೆ ಮತ್ತು ರಿಟೇಲ್‌ ಸೇವೆಗಳಲ್ಲಿ 50 ಲಕ್ಷ ತಾತ್ಕಾಲಿಕ ಉದ್ಯೋಗಗಳು ಈ ದೀಪಾವಳಿ ಹಬ್ಬದಲ್ಲಿ ಸೃಷ್ಟಿಯಾಗಿವೆ. ಗ್ರಾಮೀಣ ಮತ್ತು ಅರೆನಗರ ಪ್ರದೇಶವು ದೇಶದಲ್ಲಿ ನಡೆದ ಒಟ್ಟು ವಹಿವಾಟಿನಲ್ಲಿ ಶೇ 28ರಷ್ಟು ಪಾಲು ಹೊಂದಿದೆ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.