ADVERTISEMENT

ದಾಖಲೆ ಬರೆಯಲಿದೆಯೇ ಟೈಕಾನ್ ವರ್ಚುವಲ್ ಸಮಾವೇಶ

50 ಸಾವಿರ ಜನ ಭಾಗವಹಿಸುವ ನಿರೀಕ್ಷೆ; ನಾಲ್ಕೈದು ತಿಂಗಳಿಂದಲೇ ತಯಾರಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 11:27 IST
Last Updated 28 ಜನವರಿ 2021, 11:27 IST
ಟೈಕಾನ್ ವರ್ಚುವಲ್ ಸಮಾವೇಶದ ಪೂರ್ವ ಚಿತ್ರೀಕರಣದಲ್ಲಿ ಕ್ರಿಯೇಟಿವ್ ಡೈರಕ್ಟರ್ ಯಶವಂತ ಸರದೇಶಪಾಂಡೆ, ಸಮಾವೇಶದ ಸಂಚಾಲಕ ವಿಜಯ್ ಮಾನೆ, ಕಾರ್ಯನಿರ್ವಾಹಕ ನಿರ್ದೇಶಕ ವಿಶಾಲ್ ನಾಡಗೌಡ, ನಿರೂಪಕಿ ಪ್ರಿಯಾ ಕುಲಕರ್ಣಿ ಹಾಗೂ ಸಿನಿಮಾಟೊಗ್ರಾಫರ್ ಕಿಶನ್ ಜರತಾರಘರ
ಟೈಕಾನ್ ವರ್ಚುವಲ್ ಸಮಾವೇಶದ ಪೂರ್ವ ಚಿತ್ರೀಕರಣದಲ್ಲಿ ಕ್ರಿಯೇಟಿವ್ ಡೈರಕ್ಟರ್ ಯಶವಂತ ಸರದೇಶಪಾಂಡೆ, ಸಮಾವೇಶದ ಸಂಚಾಲಕ ವಿಜಯ್ ಮಾನೆ, ಕಾರ್ಯನಿರ್ವಾಹಕ ನಿರ್ದೇಶಕ ವಿಶಾಲ್ ನಾಡಗೌಡ, ನಿರೂಪಕಿ ಪ್ರಿಯಾ ಕುಲಕರ್ಣಿ ಹಾಗೂ ಸಿನಿಮಾಟೊಗ್ರಾಫರ್ ಕಿಶನ್ ಜರತಾರಘರ   

ಹುಬ್ಬಳ್ಳಿ: ಉದ್ಯಮಿಗಳು, ಸಾಧಕರು ಹಾಗೂ ನವೋದ್ಯಮಿಗಳ ಸಂಗಮಕ್ಕೆ ಸಾಕ್ಷಿಯಾಗುತ್ತಿದ್ದ ಟೈ ಹುಬ್ಬಳ್ಳಿ ಸಂಸ್ಥೆಯು ‘ಟೈಕಾನ್ ಸಮಾವೇಶ’ ಈ ಬಾರಿ, ವರ್ಚುವಲ್ ಆಗಿ ನಡೆಯತ್ತಿದೆ.

ಹಿಂದೆ ಸೀಮಿತ ಪ್ರೇಕ್ಷಕ ವಲಯಕ್ಕಷ್ಟೇ ಸೀಮಿತವಾಗಿರುತ್ತಿದ್ದ ಸಮಾವೇಶ, ಈ ಸಲ ಲೈವ್ ಸ್ಟ್ರೀಮಿಂಗ್‌ನಲ್ಲಿ ವಿಶ್ವದಾದ್ಯಂತ ಸಾವಿರಾರು ಮಂದಿ ತಲುಪಲಿದೆ. ವರ್ಚುವಲ್ ಸಮಾವೇಶದ ಯಶಸ್ಸಿಗಾಗಿ ಆಯೋಜಕರು ನಾಲ್ಕೈದು ತಿಂಗಳಿಂದ ತಯಾರಿ ನಡೆಸುತ್ತಿದ್ದಾರೆ.

ಪರ್ಯಾಯ ಮಾರ್ಗ:‘ಕೋವಿಡ್–19 ನಮ್ಮ ಮುಂದೆ ಹಲವು ಸವಾಲುಗಳನ್ನು ತಂದಿಟ್ಟಿದೆ. ಮುಖ್ಯವಾಗಿ ಜನ ಗುಂಪುಗೂಡದಿರುವುದು. ಇಂತಹ ಸವಾಲನ್ನು ಸಕಾರಾತ್ಮವಾಗಿ ಸ್ವೀಕರಿಸುತ್ತಲೇ, ಅದಕ್ಕೆ ಪರ್ಯಾಯವಾಗಿ ಸಮಾವೇಶವನ್ನು ವರ್ಚುವಲ್ ಆಗಿ ಆಯೋಜಿಸಲಾಗುತ್ತಿದೆ’ ಎಂದು ಸಮಾವೇಶದ ಸಂಯೋಜಕ ವಿಜಯ್ ಮಾನೆ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸಮಾವೇಶವು ಮೂರು ದಿನ ನಡೆಯಲಿದೆ. ಜ.30ರಂದು ಯುವ ಟೈಕಾನ್ ಸಮಾವೇಶ ಹಾಗೂ ಫೆ.27 ಮತ್ತು 28ರಂದು ಎರಡು ದಿನದ ಸಮಾವೇಶ ಜರುಗಲಿದೆ. ಅಂದಾಜು 50 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದ್ದು, ನೋಂದಣಿ ನಡೆಯುತ್ತಿದೆ’ ಎಂದರು.

ವಸ್ತು ಪ್ರದರ್ಶನವೂ ವರ್ಚುವಲ್:ವಸ್ತು ಪ್ರದರ್ಶನವೂ ವರ್ಚುವಲ್ ಆಗಿ ನಡೆಯಲಿದೆ. 3ಡಿ ಪ್ರದರ್ಶನದಲ್ಲಿ ಕಂಪನಿಗಳ ಉತ್ಪನ್ನಗಳನ್ನು ವೀಕ್ಷಿಸಿ, ಆಯಾ ಕಂಪನಿ ಜತೆ ಸಂಪರ್ಕ ಸಾಧಿಸಲು ಅವಕಾಶವಿರುತ್ತದೆ.

‘ದೊಡ್ಡ ಮಟ್ಟದ ವರ್ಚವಲ್ ಸಮಾವೇಶದ ಯಶಸ್ವಿಗಾಗಿ ದುಡಿಯುತ್ತಿರುವವರೆಲ್ಲರೂ ಸ್ಥಳೀಯರು. ಒಟ್ಟು 25 ಸಮಿತಿಗಳನ್ನು ರಚಿಸಿ, ಪ್ರತಿಯೊಂದಕ್ಕೂ ಒಬ್ಬರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಸಮಾವೇಶಕ್ಕೆ ₹50 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಸಮಾವೇಶ ಕುರಿತು ಹೆಚ್ಚಿನ ಮಾಹಿತಿಗೆವೆಬ್‌ಸೈಟ್: https://tiecon.tiehubli.org/ಗೆ ಭೇಟಿ ನೀಡಬಹುದು’ ಎಂದು ವಿಜಯ್ ಮಾನೆ ತಿಳಿಸಿದರು.‌

ಪ್ರೀ ರೆಕಾರ್ಡಿಂಗ್‌:ಸಮಾವೇಶದ ಪೂರ್ವತಯಾರಿ ಕುರಿತು ಮಾಹಿತಿ ನೀಡಿದ ಸೃಜನಶೀಲ ನಿರ್ದೇಶಕ ಯಶವಂತ ಸರದೇಶಪಾಂಡೆ, ‘ಸಾಧಕರು ಹಾಗೂ ಯಶಸ್ವಿ ಉದ್ಯಮಿಗಳ ಸ್ಫೂರ್ತಿಯ ಮಾತುಗಳು, ಸಂವಾದ, ಸಾಧಕರಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಮುಂಚೆಯೇ ಚಿತ್ರೀಕರಿಸಲಾಗುವುದು. ಉತ್ತರ ಕರ್ನಾಟಕ ಭಾಗದ ಸಾಧಕರು ಹಾಗೂ ಸಾಂಸ್ಕೃತಿಕ ವಿಶೇಷತೆಯ ಪ್ರದರ್ಶನ ಈ ಸಲದ ವಿಶೇಷ. ಇವೆಲ್ಲವನ್ನೂ ಲೈವ್ ಸ್ಟ್ರೀಮಿಂಗ್‌ನಲ್ಲಿ ಆನಂದಿಸಬಹುದು’ ಎಂದು ಗಮನ ಸೆಳೆದರು.

‘ಹಿರಿಯ ಅಥ್ಲೀಟ್ ಮಿಲ್ಕಾ ಸಿಂಗ್, ದೇಶಪಾಂಡೆ ಫೌಂಡೇಷನ್‌ ಸ್ಥಾಪಕ ಗುರುರಾಜ್ ದೇಶಪಾಂಡೆ, ಎಂಜಿನಿಯರ್ ಹಾಗೂ ಶಿಕ್ಷಣ ಸುಧಾರಕ ಸೋನಂ ವಾಂಗ್ಚುಕ್, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ, ಡಾ. ಉಷೇಸ್ ವಿಸ್ಡಂ ವರ್ಕ್ಸ್ ಸಿಇಒ ಹಾಗೂ ಚೀಫ್‌ ಕೋಚ್ ಡಾ. ಉಷಿ ಮೋಹನ್‌ದಾಸ್, ಸೇಲ್ಸ್‌5ಎಕ್ಸ್‌ ಸಂಸ್ಥಾಪಕ ಅನ್ಮೊಲ್ ಗರ್ಗ್‌ ಸೇರಿದಂತೆ, ‘ಇವ್ನಿಂಗ್‌ ವಿತ್‌ ಲೆಜೆಂಡ್’ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧಕರ ವಿಡಿಯೊ ಚಿತ್ರೀಕರಣವನ್ನು ಸಿನಿಮಾಟೊಗ್ರಾಫರ್ ಕಿಶನ್ ಜರತಾರಘರ ಮಾಡುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.