ADVERTISEMENT

ಹೊಸ ಇ–ಕಾಮರ್ಸ್‌ ನೀತಿಯಿಂದ ಎಫ್‌ಡಿಐಗೆ ಅಡ್ಡಿ: ಅಮೆರಿಕ–ಭಾರತ ವಾಣಿಜ್ಯ ಒಕ್ಕೂಟ

ಇ–ಕಾಮರ್ಸ್‌ ಮಾರಾಟ ನಿಯಮಗಳನ್ನು ಬಿಗಿಗೊಳಿಸಿದ ಕೇಂದ್ರ

ಪಿಟಿಐ
Published 29 ಡಿಸೆಂಬರ್ 2018, 17:32 IST
Last Updated 29 ಡಿಸೆಂಬರ್ 2018, 17:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಕೇಂದ್ರ ಸರ್ಕಾರ ಇ–ಕಾಮರ್ಸ್‌ ಮಾರಾಟ ನಿಯಮಗಳನ್ನು ಬಿಗಿಗೊಳಿಸಿದೆ. ಇದರಿಂದ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅಡ್ಡಿಯಾಗಲಿದೆ ಎಂದು ಅಮೆರಿಕ–ಭಾರತ ವಾಣಿಜ್ಯ ಒಕ್ಕೂಟ ಹೇಳಿದೆ.

ಫೆಬ್ರುವರಿ 1ರಿಂದ ಜಾರಿಗೆ ಬರಲಿರುವಹೊಸ ನಿಯಮಗಳಿಂದ ಭಾರತದ ಇ–ಕಾಮರ್ಸ್‌ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಕಂಪನಿಗಳಿಗೆ ಅತಿ ಹೆಚ್ಚಿನ ನಷ್ಟವಾಗುವ ಅಂದಾಜು ಮಾಡಲಾಗಿದೆ.

ಇದರಿಂದವಿದೇಶಿ ಹೂಡಿಕೆ ಇರುವ ಕಂಪನಿಗಳು ನೀಡುವ ಭಾರಿ ರಿಯಾಯ್ತಿ ಮತ್ತು ಕ್ಯಾಷ್‌ಬ್ಯಾಕ್‌ ಕೊಡುಗೆಗಳನ್ನು ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ.

ADVERTISEMENT

‘ಹೊಸ ನಿಯಮ ಆತಂಕಪಡುವಂತೆ ಮಾಡಿದೆ. ಅದನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೇವೆ. ಇದರಿಂದ ಅಮೆರಿಕದ ಹೂಡಿಕೆದಾರರು ಮತ್ತು ಭಾರತದ ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಭಯ ವ್ಯಕ್ತವಾಗಿದೆ’ ಎಂದು ಅಮೆರಿಕ–ಭಾರತ ವಾಣಿಜ್ಯ ಒಕ್ಕೂಟದ (ಯುಎಸ್‌ಎಐಸಿ) ಅಧ್ಯಕ್ಷೆ ನಿಷಾ ದೇಸಾಯಿ ಬಿಸ್ವಾಲ್‌ ಅಭಿಪ್ರಾಯಪಟ್ಟಿದ್ದಾರೆ.

‘ಫೆಬ್ರುವರಿ 1ರ ಗಡುವು ನೀಡಿರುವುದು ಆತುರದ ನಿರ್ಧಾರವಾಗಿದೆ. ಹೊಸ ನಿಯಮವನ್ನು ಅರ್ಥಮಾಡಿಕೊಳ್ಳಲು ಮತ್ತು ಪಾಲಿಸಲುಕಂಪನಿಗಳಿಗೆ ಇಷ್ಟು ಕಡಿಮೆ ಸಮಯ ಸಾಕಾಗುವುದಿಲ್ಲ. ಹೀಗಾಗಿ ಜಾರಿ ಅವಧಿಯನ್ನು ಮುಂದೂಡಬೇಕು ಮತ್ತು ನಿಯಮ ಜಾರಿಗೆ ಬರುವುದಕ್ಕೂ ಮೊದಲು ಪ್ರತಿಕ್ರಿಯೆ ನೀಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ’ ಎಂದು ಅವರು ಹೇಲಿದ್ದಾರೆ.

ಸರ್ಕಾರದ ನಿರ್ಧಾರದ ವಿರುದ್ಧಅಮೆರಿಕ–ಭಾರತದ ತಂತ್ರಗಾರಿಕೆ ಮತ್ತು ಪಾಲುದಾರಿಕಾ ವೇದಿಕೆಯ ಅಧ್ಯಕ್ಷ ಮುಕೇಶ್ ಅಗ್ನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಭಾರತದ ಗ್ರಾಹಕರ ಹಿತದೃಷ್ಟಿಯಿಂದ ಇದು ಉತ್ತಮ ನಿರ್ಧಾರ ಅಲ್ಲ. ಯಾವುದೇ ಸಲಹೆ ಪಡೆಯದೆ ದಿನಬೆಳಗಾಗುವುದರೊಳಗೆ ನೀತಿಯಲ್ಲಿ ಪ್ರಮುಖ ಬದಲಾವಣೆ ಮಾಡಿ, ಜಾರಿಗೊಳಿಸುವುದು ಸರಿಯಲ್ಲ. ಅದರ ಪರಿಣಾಮ ಏನಾಗಬಹುದು ಎನ್ನುವ ಅರಿವು ಸಹ ಇರಬೇಕಾಗುತ್ತದೆ’ ಎಂದು ಹೇಳಿದ್ದಾರೆ.

‘ಹೊಸ ನಿಯಮ ಜಾರಿಗೊಳಿಸುವ ಮುನ್ನ ಸಲಹೆ ಪಡೆಯುವ ಪ್ರಕ್ರಿಯೆ ಆಗಬೇಕಿದೆ. ಏಕೆಂದರೆ ವಾಲ್‌ಮಾರ್ಟ್‌ ಕಂಪನಿ ವಹಿವಾಟು ಉದ್ದೇಶಕ್ಕಾಗಿ₹ 1.12 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಇನ್ನಷ್ಟು ಹೂಡಿಕೆ ಮಾಡುವ ಯೋಜನೆ ಹೊಂದಿದೆ. ಹೀಗಿರುವಾಗ ನೀತಿಯಲ್ಲಿ ದಿಢೀರ್ ಬದಲಾವಣೆ ತಂದರೆ, ಹೂಡಿಕೆ ಮಾಡುವಂತೆ ಆ ಕಂಪನಿಯನ್ನು ಕೇಳುವುದಾದರೂ ಹೇಗೆ?’ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.