ADVERTISEMENT

ಕೃಷಿ ಸದೃಢ, ಕೈಗಾರಿಕೆ ಮಸುಕು: ಆರ್ಥಿಕ ಸಮೀಕ್ಷೆ ಅಂದಾಜು

ಕೆ.ಎಚ್.ಓಬಳೇಶ್
Published 7 ಮಾರ್ಚ್ 2025, 23:30 IST
Last Updated 7 ಮಾರ್ಚ್ 2025, 23:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ ಕೃಷಿ ವಲಯವು ಶೇ 4ರಷ್ಟು ‍‍ಪ್ರಗತಿ ಕಾಣಲಿದೆ ಎಂದು ‘ಕರ್ನಾಟಕ ಆರ್ಥಿಕ ಸಮೀಕ್ಷೆ 2024–25’ರ ವರದಿಯು ಅಂ‌ದಾಜಿಸಿದೆ.

ವಿಧಾನಸಭೆಯಲ್ಲಿ ಬಜೆಟ್‌ ಮಂಡನೆಗೂ ಮೊದಲು ಈ ಸಮೀಕ್ಷಾ ವರದಿಯನ್ನು ಮಂಡಿಸಲಾಯಿತು.

2023–24ನೇ ಸಾಲಿನಲ್ಲಿ ತೀವ್ರ ಬರಗಾಲ ಹಾಗೂ ಮಳೆ ಕೊರತೆಯಿಂದಾಗಿ ಕೃಷಿ ಮತ್ತು ಅದರ ಅವಲಂಬಿತ ವಲಯಗಳ ಬೆಳವಣಿಗೆ ದರವು ಶೇ 4.9ರಷ್ಟು ಇಳಿಕೆ ಕಂಡಿತ್ತು. ಈ ಬಾರಿ ಚೇತರಿಕೆಯ ಹಳಿಗೆ ಮರಳಲಿದೆ ಎಂದು ಹೇಳಿದೆ.

ADVERTISEMENT

‌ಆದರೆ, ಕಳೆದ ಆರ್ಥಿಕ ವರ್ಷದಲ್ಲಿ ಶೇ 7.3ರಷ್ಟಿದ್ದ ಕೈಗಾರಿಕಾ ವಲಯದ ಬೆಳವಣಿಗೆ ದರವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 5.8ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಬೆಳವಣಿಗೆ ಕುಂಠಿತಗೊಂಡಿದೆ. ಕೋವಿಡ್‌ ಸಾಂಕ್ರಾಮಿಕದ ವೇಳೆ ದಿಕ್ಕು ತ‍ಪ್ಪಿದ್ದ ಈ ವಲಯದ ಬೆಳವಣಿಗೆಯು ಚೇತರಿಕೆ ಕಾಣುತ್ತಿದೆ. ತಯಾರಿಕಾ ವಲಯದ ಶೇ 6.4ರಷ್ಟು ಬೆಳವಣಿಗೆಯು ಕೈಗಾರಿಕಾ ವಲಯದ ಒಟ್ಟಾರೆ ಪ್ರಗತಿಗೆ ಕೊಡುಗೆ ನೀಡಲಿದೆ ಎಂದು ವಿವರಿಸಿದೆ.

ಸೇವಾ ವಲಯದ ಬೆಳವಣಿಗೆಯು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಶೇ 7.9ರಷ್ಟಿದ್ದ ಈ ವಲಯದ ಪ್ರಗತಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 8.9ರಷ್ಟು ಬೆಳವಣಿಗೆ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಸೇವಾ ವಲಯದ ಪಾಲು (ಶೇ 68.1) ಹೆಚ್ಚಿದೆ. ಆ ನಂತರದ ಸ್ಥಾನದಲ್ಲಿ ಕೈಗಾರಿಕೆ (ಶೇ 20.2) ಹಾಗೂ ಕೃಷಿ ವಲಯ (ಶೇ 11.7) ಇದೆ.

ಶೇ 3ರಷ್ಟು ವಿತ್ತೀಯ ಕೊರತೆ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಎಸ್‌ಜಿಡಿಪಿ) ಶೇ 3ಕ್ಕೆ ತಗ್ಗಿಸಲಾಗಿದೆ. ಇದು ರಾಜ್ಯದ ಆರ್ಥಿಕ ಸ್ಥಿರತೆ ಮತ್ತು ಸಮರ್ಥವಾದ ಸಾರ್ವಜನಿಕ ಸೇವಾ ವಿತರಣೆಯನ್ನು ಖಾತರಿಪಡಿಸುತ್ತದೆ. ವಿತ್ತೀಯ ಶಿಸ್ತು ಕಾಯ್ದುಕೊಳ್ಳುವಲ್ಲಿ ರಾಜ್ಯ ಯಶಸ್ವಿಯಾಗಿದೆ ಎಂದು ವರದಿ ಹೇಳಿದೆ.

ತೆರಿಗೆ ಮತ್ತು ತೆರಿಗೆಯೇತರ ಆದಾಯಗಳ ಸ್ಥಿರ ಬೆಳವಣಿಗೆಯಿಂದ ಇದು ಸಾಧ್ಯವಾಗಿದೆ ಎಂದು ಹೇಳಿದೆ.

2023–24ರಲ್ಲಿ ರಾಜ್ಯದ ಸ್ವಂತ ತೆರಿಗೆ ಆದಾಯವು ₹1,61,494 ಕೋಟಿ ಇತ್ತು. 2024–25ರಲ್ಲಿ ₹1,89,893 ಕೋಟಿ ಆಗಿದೆ. ಒಟ್ಟಾರೆ ಶೇ 17.59ರಷ್ಟು ಏರಿಕೆಯಾಗಿದೆ. ತೆರಿಗೆಯೇತರ ಆದಾಯವು ₹12 ಸಾವಿರ ಕೋಟಿಯಿಂದ ₹13,499 ಕೋಟಿಗೆ ಹೆಚ್ಚಳವಾಗಿದೆ. ಒಟ್ಟಾರೆ ಶೇ 12.50ರಷ್ಟು ಏರಿಕೆಯಾಗಿದೆ.

ಶೇ 41ರಷ್ಟು ಸಾಫ್ಟ್‌ವೇರ್‌ ರಫ್ತು 

ಕರ್ನಾಟಕವು ವ್ಯಾಪಾರಿ ಸ್ನೇಹಿ ವಾತಾವರಣ ಹೊಂದಿದೆ. ರಾಜ್ಯ ಸರ್ಕಾರದ ನೀತಿಗಳು ಇದಕ್ಕೆ ಬುನಾದಿ ಹಾಕಿವೆ. ರಾಜ್ಯವು ರಫ್ತಿನಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ. 2023–24ರಲ್ಲಿ ₹13.78 ಲಕ್ಷ ಕೋಟಿ ಮೌಲ್ಯದ ರಫ್ತು ಮಾಡಲಾಗಿತ್ತು. ಭಾರತದ ಒಟ್ಟು ರಫ್ತಿನಲ್ಲಿ ರಾಜ್ಯದ ಕೊಡುಗೆ ಶೇ 20.5ರಷ್ಟಿದೆ. ದೇಶದ ಒಟ್ಟು ಸರಕು ರಫ್ತಿನ ಪಾಲು ಶೇ 6.09ರಷ್ಟಿದ್ದರೆ, ಸಾಫ್ಟ್‌ವೇರ್‌ ಮತ್ತು ಸೇವಾ ರಫ್ತು ಪಾಲು ಶೇ 41ರಷ್ಟಿದೆ. 

ವಿಕೇಂದ್ರೀಕರಣ ಸೂಚ್ಯಂಕ 

ರಾಜ್ಯದಲ್ಲಿ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಯ ಬಲವರ್ಧನೆಗೆ ಒತ್ತು ನೀಡಲಾಗಿದೆ. ಪಂಚಾಯತ್‌ರಾಜ್‌ ವ್ಯವಸ್ಥೆಯ ಒಟ್ಟಾರೆ ವಿಕೇಂದ್ರೀಕರಣ ಸೂಚ್ಯಂಕದಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕವು ಅಗ್ರಸ್ಥಾನದಲ್ಲಿದೆ. ಕೇರಳ ಮತ್ತು ತಮಿಳುನಾಡು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಇವೆ. 

ತಾಯಂದಿರ ಮರಣ ಇಳಿಕೆ

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯೊಂದಿಗೆ ರಾಜ್ಯವು ರಾಷ್ಟ್ರೀಯ ಸರಾಸರಿಗಿಂತಲೂ ‌ಹೆಚ್ಚಿನ ಪ್ರಗತಿ ಸಾಧಿಸಿದೆ. 2015–17ರಲ್ಲಿ ತಾಯಂದಿರ ಮರಣ ಪ್ರಮಾಣವು 97 (ಪ್ರತಿ ಒಂದು ಲಕ್ಷ ಜೀವಂತ ಜನನಕ್ಕೆ) ಇತ್ತು. 2018–19ರಲ್ಲಿ 69ಕ್ಕೆ ಇಳಿಕೆಯಾಗಿದೆ. ಶಿಶು ಮರಣ ಪ್ರಮಾಣವು 2015ರಲ್ಲಿ 28 ಇತ್ತು (ಒಂದು ಸಾವಿರ ಜೀವಂತ ಜನನಕ್ಕೆ). 2020ರಲ್ಲಿ 19ಕ್ಕೆ ಇಳಿದಿದೆ.

2015–16ರಲ್ಲಿ ಶೇ 1.8ರಷ್ಟಿದ್ದ ಒಟ್ಟು ಫಲವತ್ತತೆ ದರವು 2020ರಲ್ಲಿ ಶೇ 1.7ಕ್ಕೆ ಇಳಿಕೆಯಾಗಿದೆ. ಇದು ಉತ್ತಮ ಕುಟುಂಬ ಯೋಜನೆ ಮತ್ತು ತಾಯಿಯ ಆರೋಗ್ಯ ರಕ್ಷಣೆಗೆ ಕಲ್ಪಿಸಿರುವ ಸೌಲಭ್ಯಕ್ಕೆ ಕನ್ನಡಿ ಹಿಡಿದಿದೆ. 

ತಗ್ಗಿದ ಮಕ್ಕಳ ದಾಖಲಾತಿ 

ರಾಜ್ಯದಲ್ಲಿ 22,917 ಕಿರಿಯ ಪ್ರಾಥಮಿಕ ಶಾಲೆ, 30,104 ಹಿರಿಯ ಪ್ರಾಥಮಿಕ ಶಾಲೆ ಮತ್ತು 17,989 ಪ್ರೌಢಶಾಲೆಗಳಿವೆ. ಪ್ರೌಢಶಾಲೆಗಳ ಪೈಕಿ ಶೇ 26.96ರಷ್ಟು ಮಾತ್ರ ಸರ್ಕಾರದ ನಿರ್ವಹಣೆಯಲ್ಲಿವೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಹೆಚ್ಚಿದೆ. ಖಾಸಗಿ ಶಾಲೆಗಳು ನಗರ ಪ್ರದೇಶದಲ್ಲಿ ಕೇಂದ್ರೀಕೃತವಾಗಿವೆ.

ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕುಸಿದಿದೆ. 2010–11ರಲ್ಲಿ 1.29 ಕೋಟಿ ಇದ್ದ ವಿದ್ಯಾರ್ಥಿಗಳ ಸಂಖ್ಯೆಯು 2023–24ರಲ್ಲಿ 1 ಕೋಟಿಗೆ ಇಳಿದಿದೆ.

ಮಾನವ ಅಭಿವೃದ್ಧಿ: 11ನೇ ಸ್ಥಾನ

ವಿಶ್ವಸಂಸ್ಥೆಯ 2023–24ರ ಮಾನವ ಅಭಿವೃದ್ಧಿ ಸೂಚ್ಯಂಕದ ಅನ್ವಯ ಭಾರತವು 193 ರಾಷ್ಟ್ರಗಳ ಪೈಕಿ 134ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವು ಸುಧಾರಿಸಿದೆ. ರಾಜ್ಯಗಳ ಪೈಕಿ 11ನೇ ಸ್ಥಾನದಲ್ಲಿದೆ.

ಕರ್ನಾಟಕದ ಜಿಲ್ಲೆಗಳ ‍ಪೈಕಿ ಬೆಂಗಳೂರು ನಗರ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ಆ ನಂತರದ ಸ್ಥಾನದಲ್ಲಿ ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಿದೆ. ಯಾದಗಿರಿ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಯ ಕೊನೆಯ ಸ್ಥಾನದಲ್ಲಿವೆ.

ಲಿಂಗ ಅಸಮಾನತೆ

ಲಿಂಗ ಅಸಮಾನತೆ ಸೂಚ್ಯಂಕದಲ್ಲಿ (ಜಿಐಐ) ಧಾರವಾಡ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ. ಆ ನಂತರದ ಸ್ಥಾನದಲ್ಲಿ ಬೆಂಗಳೂರು ಗ್ರಾಮೀಣ, ಬೆಳಗಾವಿ ಮತ್ತು ತುಮಕೂರು ಜಿಲ್ಲೆ ಇದೆ. ಬೆಂಗಳೂರು ನಗರ ಜಿಲ್ಲೆಯು 7ನೇ ಸ್ಥಾನದಲ್ಲಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಮತ್ತು ಗದಗ ಜಿಲ್ಲೆಯು ಅತ್ಯಂತ ಕಡಿಮೆ ಜಿಐಐ ಹೊಂದಿವೆ.

ಎಸ್‌ಜಿಡಿಪಿ ಶೇ 7.4ರಷ್ಟು ಪ್ರಗತಿ

ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಎಸ್‌ಜಿಡಿಪಿ) ಗಾತ್ರವು 2023–24ರಲ್ಲಿ ₹25.57 ಲಕ್ಷ ಕೋಟಿ ಇತ್ತು. 2024–25ರಲ್ಲಿ ₹28.84 ಲಕ್ಷ ಕೋಟಿಗೆ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ. ಒಟ್ಟಾರೆ ಶೇ 12.8ರಷ್ಟು ಬೆಳವಣಿಗೆ ದಾಖಲಿಸಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಸ್‌ಜಿಡಿಪಿಯು ಶೇ 7.4ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಲಾಗಿದೆ.

2023–24ರಲ್ಲಿ ರಾಷ್ಟ್ರೀಯ ಆದಾಯಕ್ಕೆ ರಾಜ್ಯ ಆದಾಯದ ಕೊಡುಗೆಯು ಶೇ 8.6ರಷ್ಟಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 8.9ಕ್ಕೆ ಹೆಚ್ಚಳವಾಗುವ ನಿರೀಕ್ಷೆಯಿದೆ.  

ತಲಾ ಆದಾಯ ಹೆಚ್ಚಳ 

ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ ತಲಾ ಆದಾಯವು ₹3,80,906ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ದೇಶದ ತಲಾ ಆದಾಯವು ₹2,00,162 ಇದೆ. ಇದಕ್ಕೆ ಹೋಲಿಸಿದರೆ ಶೇ 90ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.

2023–24ರಲ್ಲಿ ಬೆಂಗಳೂರು ನಗರ ಜಿಲ್ಲೆಯ ತಲಾ ಆದಾಯವು ₹7,38,910 ಇದ್ದು, ಪ್ರಥಮ ಸ್ಥಾನದಲ್ಲಿದೆ. ಆ ನಂತರದ ಸ್ಥಾನದಲ್ಲಿ ದಕ್ಷಿಣ ಕನ್ನಡ (₹5,56,059), ಉಡುಪಿ (₹5,33,469), ಚಿಕ್ಕಮಗಳೂರು (₹4,44,472), ಬೆಂಗಳೂರು ಗ್ರಾಮಾಂತರ (₹4,04,138) ಮತ್ತು ಶಿವಮೊಗ್ಗ (₹3,49,177) ಜಿಲ್ಲೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.