ADVERTISEMENT

ಗಿಗ್ ಕಾರ್ಮಿಕರಿಗೆ ಕನಿಷ್ಠ ಸಂಭಾವನೆಗೆ ಸಲಹೆ: ಆರ್ಥಿಕ ಸಮೀಕ್ಷೆ ವರದಿ

ಪಿಟಿಐ
Published 29 ಜನವರಿ 2026, 17:00 IST
Last Updated 29 ಜನವರಿ 2026, 17:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಗಿಗ್ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವವರ ಪೈಕಿ ಶೇಕಡ 40ರಷ್ಟು ಮಂದಿ ತಿಂಗಳಿಗೆ ₹15 ಸಾವಿರಕ್ಕಿಂತ ಕಡಿಮೆ ಸಂಪಾದಿಸುತ್ತಿದ್ದಾರೆ ಎಂದು ಆರ್ಥಿಕ ಸಮೀಕ್ಷೆ ವರದಿಯು ಆತಂಕ ವ್ಯಕ್ತಪಡಿಸಿದೆ.

ಅಲ್ಲದೆ, ಈ ವಲಯದ ಕಾರ್ಮಿಕರ ಸ್ಥಿತಿಯಲ್ಲಿ ಸುಧಾರಣೆ ತರಲು ಕಾರ್ಮಿಕರಿಗೆ ಪ್ರತಿ ಒಂದು ಗಂಟೆಯ ಕೆಲಸಕ್ಕೆ ಅಥವಾ ವಹಿಸಿದ ಪ್ರತಿ ಒಂದು ಕೆಲಸಕ್ಕೆ ಕನಿಷ್ಠ ಸಂಭಾವನೆ ನಿಗದಿ ಆಗಬೇಕು ಎಂದು ಸಲಹೆ ನೀಡಿದೆ. ಗಿಗ್ ಕಾರ್ಮಿಕರು ಕೆಲಸದ ಭಾಗವಾಗಿ ಕಾಯುತ್ತ ನಿಂತರೆ ಅದಕ್ಕೆ ಪ್ರತ್ಯೇಕವಾಗಿ ಪರಿಹಾರ ಮೊತ್ತ ನೀಡಬೇಕು ಎಂದು ಹೇಳಿದೆ.

ದೇಶದ ಗಿಗ್ ಅರ್ಥ ವ್ಯವಸ್ಥೆಯು ಬಹಳ ವೇಗವಾಗಿ ವಿಸ್ತರಣೆ ಕಾಣುತ್ತಿದೆ. ಹೀಗಿದ್ದರೂ ಅಲ್ಲಿ ಕೆಲಸ ಮಾಡುವವರ ಆದಾಯ ಅಸ್ಥಿರವಾಗಿದೆ. ಇದರಿಂದಾಗಿ ಅವರಿಗೆ ಹಣಕಾಸಿನ ಸೇವೆಗಳು ಸರಿಯಾಗಿ ಸಿಗುತ್ತಿಲ್ಲ ಎಂಬ ದೂರುಗಳು ಇವೆ.

ADVERTISEMENT

ಸೀಮಿತ ಕೌಶಲಗಳನ್ನು ಹೊಂದಿರುವುದು, ಕೃತಕ ಬುದ್ಧಿಮತ್ತೆಯಂತಹ ತಾಂತ್ರಿಕ ಮುನ್ನಡೆಗಳಿಂದಾಗಿ ಕೆಲಸ ಕಳೆದುಕೊಳ್ಳುವ ಭಯವು ಗಿಗ್ ಕಾರ್ಮಿಕರನ್ನು ಇನ್ನಷ್ಟು ತೊಂದರೆಗೆ ಸಿಲುಕಿಸುತ್ತವೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

‘ಗಿಗ್ ಮಾರುಕಟ್ಟೆಯಲ್ಲಿ ಕೆಲಸ ಹುಡುಕಿಕೊಳ್ಳಲು ಡಿಜಿಟಲ್ ವೇದಿಕೆಗಳು ಅಗತ್ಯವಾಗಿವೆ. ಇದು ಶುಲ್ಕ, ಆಲ್ಗೊರಿದಂ ಮತ್ತು ಕಾರ್ಮಿಕರ ರಕ್ಷಣೆಗೆ ಸಂಬಂಧಿಸಿದ ಕಳವಳಕ್ಕೆ ಕಾರಣ. ಸ್ಪರ್ಧಾತ್ಮಕತೆಗೆ ಸಂಬಂಧಿಸಿದ ನಿಯಮ, ದತ್ತಾಂಶ ಲಭ್ಯತೆ, ಆಲ್ಗೊರಿದಂಗಳಲ್ಲಿ ಪಾರದರ್ಶಕತೆ ಮೂಲಕ ಇವಕ್ಕೆ ಸ್ಪಂದಿಸಬೇಕು’ ಎಂದು ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.