ನವದೆಹಲಿ: ಜಾರಿ ನಿರ್ದೇಶನಾಲಯವು (ಇ.ಡಿ) ಅಮೆಜಾನ್ ಮತ್ತು ಫ್ಯೂಚರ್ ಸಮೂಹದ ಹಿರಿಯ ಅಧಿಕಾರಿಗಳಿಗೆವಿದೇಶಿ ವಿನಿಮಯ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಸಮನ್ಸ್ ಜಾರಿಗೊಳಿಸಿದೆ ಎಂದು ಮೂಲಗಳು ಹೇಳಿವೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) ಅಡಿ ಸಮನ್ಸ್ ಜಾರಿ ಮಾಡಲಾಗಿದೆ. ದಾಖಲೆಪತ್ರಗಳೊಂದಿಗೆ ಮುಂದಿನವಾರ ಹಾಜರಾಗುವಂತೆ ಅಮೆಜಾನ್ ಇಂಡಿಯಾದ ಮುಖ್ಯಸ್ಥ ಅಮಿತ್ ಅಗರ್ವಾಲ್, ಹಿರಿಯ ಅಧಿಕಾರಿಗಳು ಹಾಗೂ ಫ್ಯೂಚರ್ ಸಮೂಹದ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಕಂಪನಿಯೊಂದರ ಷೇರುಪೇಟೆಯಲ್ಲಿ ನೋಂದಣಿ ಆಗಿಲ್ಲದ ಅಂಗಸಂಸ್ಥೆಯ ಜತೆಗೆ ಮಾಡಿಕೊಂಡಿರುವ ಒಪ್ಪಂದವು ಗೊಂದಲಕಾರಿ ಆಗಿದೆ. ಆ ಮೂಲಕ ಫ್ಯೂಚರ್ ರಿಟೇಲ್ ಅನ್ನು ನಿಯಂತ್ರಿಸಲು ಅಮೆರಿಕ ಮೂಲದ ಕಂಪನಿಯು ಮಾಡಿದ ಪ್ರಯತ್ನವನ್ನು ಎಫ್‌ಇಎಂಎ ಮತ್ತು ವಿದೇಶಿ ನೇರ ಹೂಡಿಕೆ (ಎಫ್‌ಡಿ) ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಹೈಕೋರ್ಟ್ ಹೇಳಿತ್ತು. ಈ ಕುರಿತು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ–ಕಾಮರ್ಸ್ ಕಂಪನಿಗಳ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ವಾಣಿಜ್ಯ ಸಚಿವಾಲಯವು ಇ.ಡಿ.ಗೆ ಸೂಚನೆ ನೀಡಿತ್ತು. ಇದರ ಆಧಾರದ ಮೇಲೆ ತನಿಖೆ ನಡೆಯಲಿದೆ.
‘ಫ್ಯೂಚರ್ ಗ್ರೂಪ್‌ಗೆ ಸಂಬಂಧಿಸಿದಂತೆ ಇ.ಡಿ. ನೀಡಿರುವ ಸಮನ್ಸ್ ಸ್ವೀಕರಿಸಲಾಗಿದೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಮತ್ತು ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಪ್ರತಿಕ್ರಿಯಿಸುತ್ತೇವೆ’ ಎಂದ ಅಮೆಜಾನ್‌ನ ವಕ್ತಾರರೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬೆಳವಣಿಗೆಯ ಕುರಿತು ಫ್ಯೂಚರ್ ಸಮೂಹವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಏನಿದು ಬಿಕ್ಕಟ್ಟು?: 2019ರ ಹೂಡಿಕೆ ಒಪ್ಪಂದ ಪ್ರಕಾರ, ಫ್ಯೂಚರ್ ಗ್ರೂಪ್‌ನಲ್ಲಿ ಅಮೆಜಾನ್ ಕಂಪನಿಯು ₹1,460 ಕೋಟಿ ಹೂಡಿಕೆ ಮಾಡಿತ್ತು. ಒಪ್ಪಂದ ಪ್ರಕಾರ, ಫ್ಯೂಚರ್ ಸಮೂಹವು ತನ್ನ ಆಸ್ತಿಯನ್ನು ‘ನಿರ್ಬಂಧಿತ ವ್ಯಕ್ತಿಗಳ’ ಪಟ್ಟಿಯಲ್ಲಿ ಹೇಳಿರುವ ಯಾರೊಬ್ಬರಿಗೂ ಮಾರಾಟ ಮಾಡುವಂತಿಲ್ಲ. ಆ ಪಟ್ಟಿಯಲ್ಲಿ ರಿಲಯನ್ಸ್ ಸಹ ಸೇರಿಕೊಂಡಿದೆ. ಆದರೆ, ರಿಲಯನ್ಸ್ 2020ರ ಆಗಸ್ಟ್‌ನಲ್ಲಿ ಫ್ಯೂಚರ್ ರಿಟೇಲ್‌ನ ಸಗಟು ಮತ್ತು ಇತರೆ ವಹಿವಾಟುಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಇದು 2019ರಲ್ಲಿ ಫ್ಯೂಚರ್ ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆಯಾಗಿದೆ ಎನ್ನುವುದು ಅಮೆಜಾನ್‌ನ ವಾದವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.