
ನವದೆಹಲಿ: 2024–25ರ ತೈಲ ಮಾರುಕಟ್ಟೆ ವರ್ಷದಲ್ಲಿ (ನವೆಂಬರ್‌ನಿಂದ ಅಕ್ಟೋಬರ್) ದೇಶಕ್ಕೆ 1.6 ಕೋಟಿ ಟನ್ ಅಡುಗೆ ಎಣ್ಣೆ ಆಮದಾಗಿದೆ. ಇದು ಹಣಕಾಸಿನ ಮೌಲ್ಯದಲ್ಲಿ ₹1.61 ಲಕ್ಷ ಕೋಟಿಯಷ್ಟಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ತಿಳಿಸಿದೆ.
2023–24ರ ತೈಲ ಮಾರುಕಟ್ಟೆ ವರ್ಷದಲ್ಲಿ 1.59 ಕೋಟಿ ಟನ್ ಅಡುಗೆ ಎಣ್ಣೆ ಆಮದಾಗಿತ್ತು. ಇದರ ಮೌಲ್ಯ ₹1.32 ಲಕ್ಷ ಕೋಟಿಯಷ್ಟಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗಿದೆ. ಇದರಿಂದ ಆಮದು ಮಾಡಿಕೊಂಡ ಅಡುಗೆ ಎಣ್ಣೆಯ ಬೆಲೆ, ಹಣಕಾಸಿನ ಮೌಲ್ಯದಲ್ಲಿ ಶೇ 22ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು, ಭಾರತವು 1990ರ ದಶಕದಿಂದಲೂ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಆರಂಭಿಕ ಅವಧಿಯಲ್ಲಿ, ಆಮದು ಪ್ರಮಾಣವು ತುಂಬಾ ಕಡಿಮೆ ಇತ್ತು. ಆದರೆ, ಕಳೆದ 20 ವರ್ಷಗಳಲ್ಲಿ (2004-05ರಿಂದ 2024-25), ಆಮದು ಪ್ರಮಾಣವು 2 ಪಟ್ಟು ಹೆಚ್ಚಾಗಿದ್ದರೆ, ಆಮದು ವೆಚ್ಚವು ಸುಮಾರು 15 ಪಟ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
2022–23ರ ಮಾರುಕಟ್ಟೆ ವರ್ಷದಲ್ಲಿ 1.64 ಕೋಟಿ ಟನ್, 2021–22ರಲ್ಲಿ 1.40 ಕೋಟಿ ಟನ್ ಮತ್ತು 2020–21ರಲ್ಲಿ 1.31 ಕೋಟಿ ಟನ್ ಆಮದಾಗಿತ್ತು.
2024–25ರ ತೈಲ ಮಾರುಕಟ್ಟೆ ವರ್ಷದಲ್ಲಿ 17.37 ಲಕ್ಷ ಟನ್ ರಿಫೈನ್ಡ್ ಎಣ್ಣೆ ಆಮದಾಗಿದೆ. 2023–24ರ ಇದೇ ಅವಧಿಯಲ್ಲಿ 19.31 ಲಕ್ಷ ಟನ್ ಆಮದಾಗಿತ್ತು. 2015–16ರಲ್ಲಿ ಸೋಯಾಬಿನ್ ಎಣ್ಣೆ ಆಮದು 42.3 ಲಕ್ಷ ಟನ್‌ನಷ್ಟಿತ್ತು. ಅದು 2024–25ರ ವೇಳೆಗೆ 54.7 ಲಕ್ಷ ಟನ್‌ಗೆ ಏರಿಕೆಯಾಗಿದೆ. ತಾಳೆ ಎಣ್ಣೆ ಆಮದು 90 ಲಕ್ಷ ಟನ್‌ನಿಂದ 75.8 ಲಕ್ಷ ಟನ್‌ಗೆ ಇಳಿದಿದೆ ಎಂದು ತಿಳಿಸಿದೆ.
ಭಾರತವು ಇಂಡೊನೇಷ್ಯಾ ಮತ್ತು ಮಲೇಷ್ಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್‌ನಿಂದ ಸೋಯಾಬಿನ್ ಎಣ್ಣೆ ಆಮದಾಗುತ್ತದೆ.
Highlights - null
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.