ADVERTISEMENT

ಮೊಟ್ಟೆ ದರದಲ್ಲಿ ದಾಖಲೆಯ ಏರಿಕೆ

ಕಡಿಮೆಯಾದ ಉತ್ಪಾದನೆ, ಬೇಡಿಕೆ ಹೆಚ್ಚಳ: ಎನ್‌ಇಸಿಸಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 19:56 IST
Last Updated 1 ಅಕ್ಟೋಬರ್ 2020, 19:56 IST
ಮೊಟ್ಟೆ
ಮೊಟ್ಟೆ   

ಬೆಂಗಳೂರು: ರಾಜ್ಯದಲ್ಲಿ ಮೊಟ್ಟೆ ದರವು 2017ರ ನವೆಂಬರ್‌ ನಂತರದ ದಾಖಲೆಯ ಮಟ್ಟ ತಲುಪಿದೆ. ಕೋಳಿ ಸಾಕಣೆಯಲ್ಲಿ ತೊಡಗಿಸಿಕೊಂಡಿರುವ ರೈತರಿಂದ ಖರೀದಿಸಲು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ನಿಗದಿಪಡಿಸಿರುವ ದರವು ಶುಕ್ರವಾರದ ದರವುಮೈಸೂರು ವಲಯದಲ್ಲಿ ₹ 547ಕ್ಕೆ (ಪ್ರತಿ 100 ಮೊಟ್ಟೆಗಳಿಗೆ), ಬೆಂಗಳೂರು ವಲಯದಲ್ಲಿ ₹ 545ಕ್ಕೆ ತಲುಪಿದೆ.

‘2017ರ ನವೆಂಬರ್ ತಿಂಗಳಿನ 17ರಿಂದ 22ರವರೆಗೆ ರೈತರಿಂದ ಖರೀದಿಸುವ ಒಂದು ಮೊಟ್ಟೆಯ ದರವು ₹ 5.53 (ನೂರಕ್ಕೆ ₹ 553) ಆಗಿತ್ತು. ಅದನ್ನು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಗರಿಷ್ಠ ₹ 6.50ಕ್ಕೆ ಮಾರಾಟ ಮಾಡಲಾಗಿತ್ತು. ಅದಾದ ನಂತರ, ಇಷ್ಟೊಂದು ಏರಿಕೆ ಆಗಿರಲಿಲ್ಲ’ ಎಂದು ಎನ್‌ಇಸಿಸಿಯ ಮೈಸೂರು ವಿಭಾಗದ ಮಾರಾಟ ಉತ್ತೇಜನ ವಿಭಾಗದ ಅಧಿಕಾರಿ ವಿ. ಶೇಷನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ಐದು ತಿಂಗಳುಗಳ ಹಿಂದೆ ಮೊಟ್ಟೆ ದರವು ಬಹಳ ಕುಸಿದಿತ್ತು. ಆಗ ರೈತರಿಗೆ ಮೊಟ್ಟೆ ಮಾರಾಟದಿಂದ ಅದರ ಉತ್ಪಾದನಾ ವೆಚ್ಚ ಕೂಡ ಸಿಗುತ್ತಿರಲಿಲ್ಲ. ಆಗ ಒಂದಿಷ್ಟು ರೈತರು ಕೋಳಿ ಸಾಕಣೆ ಪ್ರಮಾಣವನ್ನು ಕಡಿಮೆ ಮಾಡಿದ್ದರು. ಅದರ ಪರಿಣಾಮವು ಈಗ ಮೊಟ್ಟೆಯ ದರದಲ್ಲಿನ ಏರಿಕೆಯ ಮೂಲಕ ಗೊತ್ತಾಗುತ್ತಿದೆ ಎಂದು ವಿವರಿಸಿದರು.

ADVERTISEMENT

‘ಕೆಲವೆಡೆ ಹಕ್ಕಿಜ್ವರದ ಕಾರಣದಿಂದಾಗಿ ಕೆಲವು ತಿಂಗಳುಗಳ ಹಿಂದೆ ಕೋಳಿಗಳನ್ನು ನಾಶ ಮಾಡಲಾಗಿತ್ತು. ಅದರ ಪರಿಣಾಮವಾಗಿ ಮೊಟ್ಟೆ ಉತ್ಪಾದನೆ ಕಡಿಮೆ ಆಗಿದೆ. ಇದು ಕೂಡ ದರ ಹೆಚ್ಚುವುದಕ್ಕೆ ಒಂದು ಕಾರಣ’ ಎಂದರು. ಚಳಿ ಆರಂಭವಾಗುತ್ತಿದ್ದಂತೆಯೇ ಮೊಟ್ಟೆಗೆ ಬೇಡಿಕೆ ಜಾಸ್ತಿಯಾಗುವುದು ವಾಡಿಕೆ. ಈಗಲೂ ಬೇಡಿಕೆ ತುಸು ಜಾಸ್ತಿ ಆಗಿದೆ. ಮೊಟ್ಟೆ ಸೇವನೆಯಿಂದ ರೋಗನಿರೋಧಕ ಶಕ್ತಿಜಾಸ್ತಿ ಆಗುತ್ತದೆ ಎಂಬ ಕಾರಣಕ್ಕಾಗಿಯೂ ಕೆಲವರು ಮೊಟ್ಟೆಯ ಬಳಕೆಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.

‘ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಕೋಳಿ ಸಾಕಣೆಗೆ ಅಡಚಣೆ ಉಂಟಾಗಿತ್ತು. ಇದರಿಂದಾಗಿ ಮೊಟ್ಟೆ ಉತ್ಪಾದನೆ ಕಡಿಮೆ ಆಯಿತು. ಈಗ ಬೇಡಿಕೆಯೂ ಜಾಸ್ತಿ ಆಗಿರುವುದರ ಪರಿಣಾಮವಾಗಿ ಬೆಲೆ ಜಾಸ್ತಿಯಾಗಿದೆ’ ಎಂದು ಎನ್‌ಇಸಿಸಿ ಬೆಂಗಳೂರು ವಲಯದ ಪ್ರತಿನಿಧಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.