ಬೆಂಗಳೂರು: ಶ್ರಾವಣ ಮಾಸದಲ್ಲಿ ಧಾರ್ಮಿಕ ಆಚರಣೆಗಳು ಹೆಚ್ಚಿರುವ ಪರಿಣಾಮವಾಗಿ ಸಗಟು ಮೊಟ್ಟೆ ದರವು ಇಳಿಕೆ ಆಗಿದೆ. ಈ ಮಾಸದಲ್ಲಿ ಕೆಲವರು ಮೊಟ್ಟೆ, ಮಾಂಸ ಸೇವಿಸುವುದಿಲ್ಲ.
ಜುಲೈ 2ರಂದು ಸಗಟು ದರ ₹620 (100 ಮೊಟ್ಟೆಗೆ) ಇತ್ತು. ಇದು ಆಗಸ್ಟ್ 2ಕ್ಕೆ ₹485ಕ್ಕೆ ಇಳಿದಿದೆ. ಒಟ್ಟು ₹135ರಷ್ಟು ಇಳಿಕೆ ಆಗಿದೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ದರ ಇಳಿಕೆ ಸಹಜ. ಅಲ್ಲದೆ, ಮಹಾರಾಷ್ಟ್ರಕ್ಕೆ ರಾಜ್ಯದಿಂದ ಪೂರೈಕೆಯಾಗುತ್ತಿದ್ದ ಮೊಟ್ಟೆ ಪ್ರಮಾಣ ಇಳಿಕೆ ಆಗಿದೆ. ಇವೆಲ್ಲ ದರ ಇಳಿಕೆಗೆ ಕಾರಣ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ (ಎನ್‌ಇಸಿಸಿ) ಮೈಸೂರು ವಿಭಾಗದ ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ ವಿ. ಶೇಷನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.
ಕೋಳಿಗಳಿಗೆ ಆಹಾರವಾಗಿ ನೀಡುವ ಮೆಕ್ಕೆಜೋಳದ ಬೆಲೆಯು ಕಳೆದ ಬಾರಿ ಮಳೆಯ ಕಾರಣಕ್ಕೆ ಏರಿಕೆಯಾಗಿತ್ತು. ಈ ಬಾರಿ ದರ ಕಡಿಮೆ ಇದೆ. ಇದು ಕೂಡ ಮೊಟ್ಟೆ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ತಿಳಿಸಿದರು.
ಆದರೆ, ಚಿಲ್ಲರೆ ಅಂಗಡಿ ವ್ಯಾಪಾರಿಗಳು ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ. ಒಂದು ಮೊಟ್ಟೆಯು ₹6ರಿಂದ ₹6.5 ದರಕ್ಕೆ ಮಾರಾಟ ಆಗುತ್ತಿದೆ, ವರ್ತಕರಿಗೆ ಲಾಭ ಸಿಗುತ್ತಿದೆ ಎಂದು ಹೇಳಿದರು.
ಸೌದಿಗೆ ಮೈಸೂರಿನಿಂದ 4 ಲಕ್ಷ ಮೊಟ್ಟೆ
ಇದೇ ಮೊದಲ ಬಾರಿಗೆ ಮೈಸೂರಿನಿಂದ ಸೌದಿ ಅರೇಬಿಯಾಕ್ಕೆ ಒಂದು ಕಂಟೇನರ್ ಮೊಟ್ಟೆ ರಫ್ತು ಮಾಡಲಾಗಿದೆ. ಈ ಕಂಟೇನರ್‌ನಲ್ಲಿ 4.22 ಲಕ್ಷ ಮೊಟ್ಟೆಗಳಿರುತ್ತವೆ ಎಂದು ಶೇಷನಾರಾಯಣ ಹೇಳಿದರು. ‘ಮತ್ತೆ ಬೇಡಿಕೆ ಬಂದರೆ ಮೊಟ್ಟೆ ಪೂರೈಸಲು ಸಿದ್ಧವಾಗಿದ್ದೇವೆ. ಆದರೆ ರಫ್ತು ಮಾಡಲು ಇರುವ ನಿಯಮಗಳು ತೊಂದರೆ ಉಂಟು ಮಾಡುತ್ತಿವೆ. ಸರ್ಕಾರ ನಿಯಮಗಳನ್ನು ಸಡಿಲಿಸಿದರೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.