ADVERTISEMENT

ಒಂದು ವರ್ಷದಲ್ಲಿ 14 ಲಕ್ಷ ಇ–ವಾಹನ ಮಾರಾಟ: ಎಚ್‌.ಡಿ. ಕುಮಾರಸ್ವಾಮಿ

ಪಿಟಿಐ
Published 18 ಜನವರಿ 2025, 13:35 IST
Last Updated 18 ಜನವರಿ 2025, 13:35 IST
<div class="paragraphs"><p>ಎಚ್‌.ಡಿ. ಕುಮಾರಸ್ವಾಮಿ</p></div>

ಎಚ್‌.ಡಿ. ಕುಮಾರಸ್ವಾಮಿ

   

ನವದೆಹಲಿ: ‘ದೇಶದಲ್ಲಿ ಕಳೆದ ವರ್ಷ 14.08 ಲಕ್ಷ ವಿದ್ಯುತ್‌ಚಾಲಿತ ವಾಹನಗಳು ಮಾರಾಟವಾಗಿವೆ. ಒಟ್ಟು ಮಾರಾಟದಲ್ಲಿ ಶೇ 5.59ರಷ್ಟು ಏರಿಕೆಯಾಗಿದೆ’ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ವಾಹನ ವಿತರಕರ ಸಂಘಟನೆಗಳ ಒಕ್ಕೂಟದಿಂದ (ಎಫ್‌ಎಡಿಎ) ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘2023ರಲ್ಲಿ 10.22 ಲಕ್ಷ ವಿದ್ಯುತ್‌ಚಾಲಿತ ವಾಹನಗಳು ಮಾರಾಟವಾ‌‌ಗಿದ್ದವು’ ಎಂದರು.

ADVERTISEMENT

ದೇಶದಲ್ಲಿ ಇ–ವಾಹನಗಳ ಮೇಲೆ ಗ್ರಾಹಕರಲ್ಲಿ ನಂಬಿಕೆ ಹೆಚ್ಚುತ್ತಿದೆ. ಇ.ವಿ ವಲಯದಲ್ಲಿನ ಹೊಸ ಅನ್ವೇಷಣೆ ಮತ್ತು ಸರ್ಕಾರದ ಪ್ರೋತ್ಸಾಹವು ಸಕಾರಾತ್ಮಕ ಪರಿಣಾಮ ಬೀರಿದೆ ಎಂದರು. 

ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆ ನಡುವೆಯೂ ದೇಶದ ಆಟೊಮೊಬೈಲ್‌ ವಲಯದ ಬೆಳವಣಿಗೆಯು ಉತ್ತಮವಾಗಿದೆ ಎಂದು ಹೇಳಿದರು.

ಕಳೆದ ವರ್ಷ 2.6 ಕೋಟಿ ವಾಹನಗಳು ಮಾರಾಟವಾಗಿವೆ. ಚಿಲ್ಲರೆ ಮಾರಾಟದಲ್ಲಿ ಶೇ 9ರಷ್ಟು ಹೆಚ್ಚಳವಾಗಿದೆ ಎಂದರು.

ಉತ್ಪಾದನೆ ಆಧರಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ಬಜೆಟ್‌ನಲ್ಲಿ ₹25,938 ಕೋಟಿ ಮೀಸಲಿಡಲಾಗಿದೆ. ಪಿಎಲ್‌ಐ ಅಡಿ 115 ಅರ್ಜಿಗಳು ಸಲ್ಲಿಕೆಯಾಗಿದ್ದು, 82 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. ಒಟ್ಟು 42,500 ಕೋಟಿ ಬಂಡವಾಳ ಹೂಡಿಕೆ ಹಾಗೂ ಹೆಚ್ಚುವರಿಯಾಗಿ 2.31 ಕೋಟಿ ವಾಹನಗಳ ಮಾರಾಟವನ್ನು ನಿರೀಕ್ಷಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 1.4 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.