ನವದೆಹಲಿ: ಉದ್ಯೋಗಿಗಳು ಮುಖ ಚಹರೆ ದೃಢೀಕರಣದ ಮೂಲಕ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಸೃಷ್ಟಿಸಲು ಅಥವಾ ಸಕ್ರಿಯಗೊಳಿಸಲು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಹೊಸ ಫೀಚರ್ ಅನ್ನು ಪರಿಚಯಿಸಿದೆ.
ಉಮಾಂಗ್ ಮೊಬೈಲ್ ಆ್ಯಪ್ ಮೂಲಕ ಉದ್ಯೋಗಿಗಳೇ ನೇರವಾಗಿ ಆಧಾರ್ ಆಧರಿತ ಮುಖ ಚಹರೆಯ ದೃಢೀಕರಣ ತಂತ್ರಜ್ಞಾನದಡಿ (ಎಫ್‌ಎಟಿ) ಯುಎಎನ್ ಹಾಗೂ ಅದಕ್ಕೆ ಸಂಬಂಧಿಸಿದ ಸೇವೆ ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಇಪಿಎಫ್ ಖಾತೆ ಹೊಂದಿರುವ ಉದ್ಯೋಗಿಗಳಿಗೆ ಸಹಕಾರಿಯಾಗಲಿದೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ, ‘ಇಪಿಎಫ್‌ಒದಿಂದ ಈ ಡಿಜಿಟಲ್ ಸೇವೆಗೆ ಚಾಲನೆ ನೀಡಲಾಗಿದ್ದು, ಕೋಟ್ಯಂತರ ಚಂದಾದಾರರಿಗೆ ಸುರಕ್ಷಿತವಾದ ಈ ಡಿಜಿಟಲ್ ಸೇವೆ ದೊರೆಯಲಿದೆ’ ಎಂದು ಹೇಳಿದರು.
ಉದ್ಯೋಗಿಯು ನೇರವಾಗಿ ಯುಎಎನ್ ಸೃಷ್ಟಿಸಬಹುದಾಗಿದೆ. ಅಲ್ಲದೆ, ಉದ್ಯೋಗದಾತ ಸಂಸ್ಥೆಯು ಹೊಸದಾಗಿ ಕೆಲಸಕ್ಕೆ ಸೇರಿದ ಉದ್ಯೋಗಿಯ ಯುಎಎನ್ ಅನ್ನು ಈ ಪ್ರಕ್ರಿಯೆ ಮೂಲಕ ಸೃಜಿಸಬಹುದಾಗಿದೆ ಎಂದು ತಿಳಿಸಿದರು.
‘ಈಗಾಗಲೇ ಯುಎಎನ್ ಸೃಷ್ಟಿಸಿದ್ದು, ಸಕ್ರಿಯವಾಗಿಲ್ಲದಿರುವ ನಂಬರ್‌ಗಳನ್ನೂ ಉಮಾಂಗ್ ಆ್ಯಪ್ ಮೂಲಕ ಸಕ್ರಿಯಗೊಳಿಸಬಹುದಾಗಿದೆ’ ಎಂದರು.
ಮುಂಬರುವ ದಿನಗಳಲ್ಲಿ ಮುಖ ಚಹರೆ ದೃಢೀಕರಣದ ಮೂಲಕವೇ ಡಿಜಿಟಲ್ ರೂಪದ ‘ಜೀವನ್ ಪ್ರಮಾಣ ಪತ್ರ’ಗಳ ವಿತರಣೆಗೆ ಇಪಿಎಫ್‌ಒ ಮುಂದಾಗಿದೆ ಎಂದು ತಿಳಿಸಿದರು.
2024–25ನೇ ಆರ್ಥಿಕ ವರ್ಷದಲ್ಲಿ ಇಪಿಎಫ್‌ಒದಿಂದ 1.26 ಕೋಟಿ ಯುಎಎನ್‌ಗಳನ್ನು ನೀಡಲಾಗಿದೆ. ಈ ಪೈಕಿ 44 ಲಕ್ಷವಷ್ಟೇ (ಶೇ 35.30) ಸಕ್ರಿಯವಾಗಿದೆ ಎಂದು ವಿವರಿಸಿದರು.
ಪ್ರಕ್ರಿಯೆ ಹೇಗೆ?
ಯುಎಎನ್ ಸೃಷ್ಟಿಸಬೇಕಿರುವ ಉದ್ಯೋಗಿಯು ಮೊದಲ ಉಮಾಂಗ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಮುಖ ಚಹರೆ ಮೂಲಕ ಯುಎಎನ್ ಸರ್ವಿಸಸ್ ಅಡಿ ಅಲಾಟ್‌ಮೆಂಟ್ ಮತ್ತು ಆ್ಯಕ್ಟಿವೇಶನ್‌ಗೆ ವಿಭಾಗಕ್ಕೆ ಅಲ್ಲಿ ಸೂಚಿಸಿರುವ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಅಲ್ಲಿ ಆಧಾರ್ ಸಂಖ್ಯೆ ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಮೂದಿಸಬೇಕಿದೆ. ಈ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಇದನ್ನು ನಮೂದಿಸಿದ ಬಳಿಕ ಯುಎಎನ್ ಸೃಷ್ಟಿಯಾಗಲಿದೆ. ಬಳಿಕ ನೋಂದಣಿ ಮಾಡಿರುವ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಯುಎಎನ್ ನಂಬರ್ ರವಾನೆಯಾಗಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉದ್ಯೋಗಿಯು ಉಮಾಂಗ್ ಆ್ಯಪ್ ಅಥವಾ ಮೆಂಬರ್ ಪೋರ್ಟಲ್‌ನಲ್ಲಿ ಯುಎಎನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.