ADVERTISEMENT

EPFO: ಏಕಾಏಕಿ ಅರ್ಜಿ ಅಮಾನ್ಯಕ್ಕೆ ನಿರ್ಬಂಧ

ಪಿಟಿಐ
Published 14 ಡಿಸೆಂಬರ್ 2023, 15:52 IST
Last Updated 14 ಡಿಸೆಂಬರ್ 2023, 15:52 IST
   

ಬೆಂಗಳೂರು: ಗರಿಷ್ಠ ಪಿಂಚಣಿಗೆ ಸಂಬಂಧಿಸಿದಂತೆ ಉದ್ಯೋಗಿಗಳು, ಕಾರ್ಮಿಕ ಸಂಘಟನೆಗಳು ಹಾಗೂ ಉದ್ಯೋಗದಾತ ಸಂಸ್ಥೆಗಳು ಸ್ಪಷ್ಟನೆ ಬಯಸಿ ಕೇಳಿದ ಸಾಮಾನ್ಯ ಪ್ರಶ್ನೆಗಳಿಗೆ, ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಉತ್ತರಿಸಿದೆ.  

ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) 2014ರ ಯೋಜನೆಯ (ಇಪಿಎಸ್‌) ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದ ಒಂದು ವರ್ಷದ ಬಳಿಕ ತನ್ನ ವೆಬ್‌ಸೈಟ್‌ನಲ್ಲಿ ಈ ಪರಿಷ್ಕೃತ ಉತ್ತರ ಪ್ರಕಟಿಸಿದೆ.

ಹೆಚ್ಚಿನ ವೇತನ ಆಧಾರದ ಮೇಲೆ ಗರಿಷ್ಠ ಪಿಂಚಣಿ ಪಡೆಯುವ ಸಂಬಂಧ ಉದ್ಯೋಗಿಗಳು ಆನ್‌ಲೈನ್‌ನಲ್ಲಿ ಸಲ್ಲಿಸಿರುವ ಅರ್ಜಿ ಹಾಗೂ ಅದಕ್ಕೆ ಲಗತ್ತಿಸಿರುವ ದಾಖಲೆಗಳ (ಉದ್ಯೋಗಿ ಮತ್ತು ಉದ್ಯೋಗದಾತ ಸಂಸ್ಥೆಯ ಜಂಟಿ ಘೋಷಣೆ ಸಹಿತ) ಮೌಲ್ಯಮಾಪನದ ವೇಳೆ ತಲೆದೋರಿದ್ದ ಗೊಂದಲ ಪರಿಹರಿಸುವ ಪ್ರಯತ್ನ ಮಾಡಿದೆ. 

ADVERTISEMENT

ಯಾವೆಲ್ಲಾ ದಾಖಲೆ ಸಲ್ಲಿಸಬೇಕು?:

ಉದ್ಯೋಗಿಗಳ ಭವಿಷ್ಯ ನಿಧಿ (ಇ‍ಪಿಎಫ್‌) 1952ರ ಯೋಜನೆಯ 26(6)ರ ಅನ್ವಯ ₹15 ಸಾವಿರ ಮಿತಿಗಿಂತಲೂ ಹೆಚ್ಚಿನ ಪಿಂಚಣಿ ಕೋರಿ ಉದ್ಯೋಗಿಯು, ಸಂಬಂಧಪಟ್ಟ ಉದ್ಯೋಗದಾತ ಸಂಸ್ಥೆಯಲ್ಲಿ ಕೋರಿಕೆ ಸಲ್ಲಿಸಬೇಕಿದೆ. ಆ ಬಳಿಕ ಸಂಸ್ಥೆಯು ತನ್ನ ಮೊಹರಿನೊಂದಿಗೆ ನೀಡಿದ ದಾಖಲೆಗಳ ಸಹಿತ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಈ ಮಾಹಿತಿಯನ್ನು ಪರಿಶೀಲನೆ ನಡೆಸುವುದು ಭವಿಷ್ಯ ನಿಧಿ ಕಚೇರಿಯ ಕ್ಷೇತ್ರ ಅಧಿಕಾರಿಗಳ ಹೊಣೆಯಾಗಿದೆ. 

ಈ ಅರ್ಜಿಯೊಂದಿಗೆ ಉದ್ಯೋಗಿಯು ಸಂಸ್ಥೆಯಿಂದ ನೀಡಿರುವ ವೇತನದ ವಿವರ ಸಲ್ಲಿಸಿರಬೇಕಿದೆ. ತಿಂಗಳವಾರು ವೇತನದ ಪಟ್ಟಿಯೂ ಇರಬೇಕು. ಜಂಟಿ ಘೋಷಣೆಗೆ ಸಂಬಂಧಿಸಿದಂತೆ ಸಂಸ್ಥೆ ನೀಡಿರುವ ಪತ್ರವನ್ನು ಲಗತ್ತಿಸಿರುವುದು ಕಡ್ಡಾಯ.

ಇದರೊಟ್ಟಿಗೆ ಗರಿಷ್ಠ ಪಿಂಚಣಿ ಸಂಬಂಧ 2022ರ ನವೆಂಬರ್‌ 4ರಂದು ಭವಿಷ್ಯ ನಿಧಿ ಕಚೇರಿಯಿಂದ ಸಂಸ್ಥೆಗೆ ನೀಡಿರುವ ಪತ್ರವನ್ನೂ ಲಗತ್ತಿಸಬೇಕಿದೆ. ಅಲ್ಲದೇ, ಉದ್ಯೋಗಿಯು ನೌಕರರ ಭವಿಷ್ಯ ನಿಧಿಗೆ ತಿಂಗಳುವಾರು ನೀಡಿರುವ ಕೊಡುಗೆಯ ವಿವರವನ್ನೂ ನೀಡಬೇಕಿದೆ.

ತಿರಸ್ಕಾರಕ್ಕೆ ಅವಕಾಶವಿಲ್ಲ:

ಆನ್‌ಲೈನ್‌ನಲ್ಲಿ ಉದ್ಯೋಗಿಯು ಸೂಕ್ತ ದಾಖಲೆಗಳನ್ನು ಅಪ್‌ಲೋಡ್‌ ಮಾಡಿಲ್ಲ ಎಂಬ ಆಧಾರದ ಮೇಲೆ ಅರ್ಜಿಯನ್ನು ಏಕಾಏಕಿ ತಿರಸ್ಕರಿಸುವ ಅಧಿಕಾರ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಗೆ ಇಲ್ಲ ಎಂದು ಇಪಿಎಫ್‌ಒ ಸ್ಪಷ್ಟಪಡಿಸಿದೆ.

ಉದ್ಯೋಗಿಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಉದ್ಯೋಗದಾತ ಸಂಸ್ಥೆಯಿಂದ ಸಂಗ್ರಹಿಸಿರುವುದು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆಯುಕ್ತರ ಹೊಣೆಯಾಗಿದೆ. ಸಂಬಳದ ವಿವರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಂಸ್ಥೆಯಿಂದ ಸಲ್ಲಿಕೆಯಾಗದಿದ್ದರಷ್ಟೇ ಅರ್ಜಿ ತಿರಸ್ಕಾರವಾಗುತ್ತದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.