ADVERTISEMENT

ಮ್ಯೂಚುವಲ್‌ ಫಂಡ್‌: ಈಕ್ವಿಟಿಯಲ್ಲಿ ಡಿಸೆಂಬರ್‌ನಲ್ಲಿ ₹ 25 ಸಾವಿರ ಕೋಟಿ ಹೂಡಿಕೆ

ಪಿಟಿಐ
Published 10 ಜನವರಿ 2022, 16:10 IST
Last Updated 10 ಜನವರಿ 2022, 16:10 IST
   

ನವದೆಹಲಿ: ಈಕ್ವಿಟಿ ಆಧಾರಿತ ಮ್ಯೂಚುವಲ್‌ ಫಂಡ್‌ಗಳಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಆಗಿರುವ ನಿವ್ವಳ ಹೂಡಿಕೆಯ ಮೊತ್ತವು ₹ 25 ಸಾವಿರ ಕೋಟಿ ದಾಟಿದೆ. ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ಹೆಚ್ಚಿನ ಹೂಡಿಕೆ ಆಗಿದೆ. ಮಲ್ಟಿಕ್ಯಾಪ್‌ ಫಂಡ್‌ಗಳಲ್ಲಿ ದೊಡ್ಡ ಮಟ್ಟದಲ್ಲಿ ಹಣದ ಒಳಹರಿವು ಕಂಡುಬಂದಿದೆ.

ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಸೋಮವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಈ ವಿವರ ನೀಡಿವೆ. ನವೆಂಬರ್‌ನಲ್ಲಿ ಈಕ್ವಿಟಿ ಆಧಾರಿತ ಮ್ಯೂಚುವಲ್‌ ಫಂಡ್‌ಗಳಲ್ಲಿ ₹ 11,615 ಕೋಟಿ, ಅಕ್ಟೋಬರ್‌ನಲ್ಲಿ ₹ 5,215 ಕೋಟಿ ಒಳಹರಿವು ಆಗಿತ್ತು.

ಡಿಸೆಂಬರ್‌ನಲ್ಲಿನ ಒಳಹರಿವು ₹ 25,077 ಕೋಟಿ ಆಗಿದೆ. 2021ರ ಮಾರ್ಚ್‌ನಿಂದಲೂ ಈಕ್ವಿಟಿ ಆಧಾರಿತ ಫಂಡ್‌ಗಳಲ್ಲಿ ಹೂಡಿಕೆ ಆಗುತ್ತಿರುವ ಮೊತ್ತವು ಹಿಂದಕ್ಕೆ ಪಡೆಯಲಾಗುತ್ತಿರುವ ಮೊತ್ತಕ್ಕಿಂತ ಹೆಚ್ಚಿನದಾಗಿದೆ. ಆದರೆ, 2020ರ ಜುಲೈನಿಂದ 2021ರ ಫೆಬ್ರುವರಿವರೆಗಿನ ಅವಧಿಯಲ್ಲಿ ಹೂಡಿಕೆ ಆದ ಮೊತ್ತಕ್ಕಿಂತ, ಹಿಂದಕ್ಕೆ ಪಡೆದ ಮೊತ್ತವೇ ಹೆಚ್ಚಿನದಾಗಿತ್ತು.

ADVERTISEMENT

ಡಿಸೆಂಬರ್‌ ಕೊನೆಯ ವೇಳೆಗೆ ದೇಶದ ಮ್ಯೂಚುವಲ್‌ ಫಂಡ್‌ ಉದ್ಯಮದ ಮೂಲಕ ಹೂಡಿಕೆ ಆಗಿರುವ ಹಣದ ಒಟ್ಟು ಮೊತ್ತ ₹ 37.72 ಲಕ್ಷ ಕೋಟಿ ಆಗಿತ್ತು. ಡಿಸೆಂಬರ್‌ನಲ್ಲಿ ಮಾಸಿಕ ಎಸ್‌ಐಪಿ ಮೊತ್ತವು ₹ 11,305 ಕೋಟಿಗೆ ಹೆಚ್ಚಳ ಆಗಿದೆ. ಅಲ್ಲದೆ, ಎಸ್‌ಐಪಿ ಖಾತೆಗಳ ಸಂಖ್ಯೆಯು 4.91 ಕೋಟಿಗೆ ಏರಿಕೆ ಆಗಿದೆ.

ಹಣಕಾಸಿನ ಸಾಕ್ಷರತೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಂದಾಗಿ ಸಣ್ಣ ಹೂಡಿಕೆದಾರರು ಈಕ್ವಿಟಿ ಮಾರುಕಟ್ಟೆಯ ಅಸ್ಥಿರತೆಗಳನ್ನು ಎಸ್‌ಐಪಿ ಮೂಲಕ ನಿಭಾಯಿಸುವುದು ಹೇಗೆ ಎಂಬುದನ್ನು ಕಲಿಯುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್‌ ತಿಂಗಳಿನಲ್ಲಿ ಒಟ್ಟು 20 ಹೊಸ ಫಂಡ್‌ಗಳು ಹೂಡಿಕೆಗೆ ಮುಕ್ತವಾಗಿವೆ. ಚಿನ್ನದ ವಿನಿಮಯ ವಹಿವಾಟು ನಿಧಿಗಳು ಡಿಸೆಂಬರ್‌ನಲ್ಲಿ ₹ 313 ಕೋಟಿ ಹೂಡಿಕೆಯನ್ನು ಆಕರ್ಷಿಸಿವೆ. ನವೆಂಬರ್‌ನಲ್ಲಿನ ₹ 682 ಕೋಟಿ ಹೂಡಿಕೆಗೆ ಹೋಲಿಸಿದರೆ ಇದು ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.