
ನವದೆಹಲಿ: ‘ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್‌ನಲ್ಲಿ (ಎಂ.ಎಫ್) 2025ರ ಡಿಸೆಂಬರ್ ತಿಂಗಳಿನಲ್ಲಿ ₹28,054 ಕೋಟಿ ಒಳಹರಿವು ಆಗಿದೆ. ಇದು ನವೆಂಬರ್ ತಿಂಗಳಿಗೆ ಹೋಲಿಸಿದರೆ ಶೇ 6ರಷ್ಟು ಇಳಿಕೆ’ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟವು (ಎಎಂಎಫ್‌ಐ) ಶುಕ್ರವಾರ ತಿಳಿಸಿದೆ.
ಈಕ್ವಿಟಿ ಒಳಹರಿವು ಇಳಿಕೆಯಿಂದ ಉದ್ಯಮದ ಒಟ್ಟು ಸಂಪತ್ತಿನ ನಿರ್ವಹಣಾ ಮೌಲ್ಯವು (ಎಯುಎಂ) ಡಿಸೆಂಬರ್‌ನಲ್ಲಿ ₹80.23 ಲಕ್ಷ ಕೋಟಿಗೆ ಇಳಿದಿದೆ. ನವೆಂಬರ್‌ನಲ್ಲಿ ಇದು ₹80.80 ಲಕ್ಷ ಕೋಟಿಯಷ್ಟಿತ್ತು. ಡೆಟ್ ಮ್ಯೂಚುವಲ್ ಫಂಡ್‌ನಲ್ಲಿನ ಬಂಡವಾಳದ ಹೆಚ್ಚಿನ ಹೊರಹರಿವು, ಈಕ್ವಿಟಿ ಎಂ.ಎಫ್‌ನಲ್ಲಿ ಒಳಹರಿವು ಕಡಿಮೆ ಆಗಲು ಕಾರಣ ಎಂದು ತಿಳಿಸಿದೆ.
ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ (ಎಸ್‌ಐಪಿ) ನವೆಂಬರ್‌ನಲ್ಲಿ ₹29,445 ಕೋಟಿಯಷ್ಟು ಹೂಡಿಕೆ ಆಗಿತ್ತು. ಇದು ಡಿಸೆಂಬರ್‌ನಲ್ಲಿ ₹31 ಸಾವಿರ ಕೋಟಿಗೆ ಹೆಚ್ಚಳವಾಗಿದ್ದು, ಹೂಡಿಕೆದಾರರು ಶಿಸ್ತುಬದ್ಧ ಮತ್ತು ದೀರ್ಘಾವಧಿ ಸಂಪತ್ತಿನ ಸೃಷ್ಟಿಯತ್ತ ಆದ್ಯತೆ ನೀಡುತ್ತಿರುವುದನ್ನು ಇದು ತೋರಿಸುತ್ತಿದೆ. 2025ರಲ್ಲಿ ₹3.34 ಲಕ್ಷ ಕೋಟಿ ಎಸ್‌ಐಪಿ ಮೂಲಕ ಹೂಡಿಕೆ ಆಗಿದೆ.
ಒಟ್ಟಾರೆಯಾಗಿ, ಮ್ಯೂಚುವಲ್ ಫಂಡ್ ಉದ್ಯಮದ ಹೊರಹರಿವು ಡಿಸೆಂಬರ್‌ನಲ್ಲಿ ₹66,591 ಕೋಟಿ ಆಗಿದೆ. ಆದರೆ, ನವೆಂಬರ್ ತಿಂಗಳಿನಲ್ಲಿ ₹29,911 ಕೋಟಿ, ಅಕ್ಟೋಬರ್‌ನಲ್ಲಿ ₹24,690 ಕೋಟಿ ಒಳಹರಿವಾಗಿತ್ತು.
ಫ್ಲೆಕ್ಸಿ ಕ್ಯಾಫ್ ಫಂಡ್‌ನಲ್ಲಿ ನವೆಂಬರ್ ತಿಂಗಳಿನಲ್ಲಿ ₹8,135 ಕೋಟಿ ಒಳಹರಿವಾಗಿದ್ದರೆ, ಡಿಸೆಂಬರ್‌ನಲ್ಲಿ ₹10,019 ಕೋಟಿಯಷ್ಟಾಗಿದೆ. ಅನಿಶ್ಚಿತ ಮಾರುಕಟ್ಟೆ ಪರಿಸ್ಥಿತಿಯಲ್ಲೂ ಹೆಚ್ಚುತ್ತಿರುವ ಬಂಡವಾಳ ಒಳಹರಿವನ್ನು ಇದು ತೋರಿಸುತ್ತದೆ ಎಂದು ತಿಳಿಸಿದೆ.
ಮಿಡ್‌ಕ್ಯಾಪ್ ಫಂಡ್ ₹4,176 ಕೋಟಿ, ಸ್ಮಾಲ್‌ಕ್ಯಾಪ್ ₹3,824 ಕೋಟಿ ಮತ್ತು ಲಾರ್ಜ್‌ಕ್ಯಾಪ್ ಫಂಡ್ ₹1,567 ಕೋಟಿ ಒಳಹರಿವಾಗಿದೆ. ಡಿಸೆಂಬರ್‌ನಲ್ಲಿ ಡೆಟ್ ಮ್ಯೂಚುವಲ್ ಫಂಡ್‌ನಲ್ಲಿ ₹1.32 ಲಕ್ಷ ಕೋಟಿ ಹೊರಹರಿವಾಗಿದೆ. ನವೆಂಬರ್‌ನಲ್ಲಿ ಇದು ₹25,693 ಕೋಟಿಯಷ್ಟಾಗಿತ್ತು.
ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ₹11,647 ಕೋಟಿಗೆ ಏರಿಕೆಯಾಗಿದೆ. ಇದು ನವೆಂಬರ್‌ನಲ್ಲಿ ₹3,742 ಕೋಟಿ ಮತ್ತು ಅಕ್ಟೋಬರ್‌ನಲ್ಲಿ ₹7,743 ಕೋಟಿಯಷ್ಟಾಗಿತ್ತು. ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದನ್ನು ಇದು ತಿಳಿಸುತ್ತದೆ ಎಂದು ಹೇಳಿದೆ.
Highlights - null
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.