ADVERTISEMENT

ಒಂಭತ್ತು ನಗರಗಳಲ್ಲಿ ಇ.ವಿ. ಚಾರ್ಜಿಂಗ್‌ ಕೇಂದ್ರಗಳ ಸಂಖ್ಯೆ ಹೆಚ್ಚಳ

ಪಿಟಿಐ
Published 19 ಫೆಬ್ರುವರಿ 2022, 16:23 IST
Last Updated 19 ಫೆಬ್ರುವರಿ 2022, 16:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ಒಂಭತ್ತು ನಗರಗಳಲ್ಲಿ ನಾಲ್ಕು ತಿಂಗಳಿನಲ್ಲಿ ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ಚಾರ್ಜಿಂಗ್‌ ಕೇಂದ್ರಗಳ ಸಂಖ್ಯೆಯು ಎರಡೂವರೆ ಪಟ್ಟು ಹೆಚ್ಚಳ ಕಂಡಿದೆ ಎಂದು ಇಂಧನ ಸಚಿವಾಲಯ ಹೇಳಿದೆ.

2021ರ ಅಕ್ಟೋಬರ್‌ನಿಂದ 2022ರ ಜನವರಿ ಅವಧಿಯಲ್ಲಿ ಒಂಭತ್ತು ನಗರಗಳಲ್ಲಿ 678 ಚಾರ್ಜಿಂಗ್‌ ಕೇಂದ್ರಗಳನ್ನು ಅಳವಡಿಸಲಾಗಿದೆ. ದೇಶದಲ್ಲಿ ಇರುವ ಒಟ್ಟಾರೆ 1,640 ಚಾರ್ಜಿಂಗ್‌ ಕೇಂದ್ರಗಳಲ್ಲಿ 940 ಚಾರ್ಜಿಂಗ್‌ ಕೇಂದ್ರಗಳು ಈ ಒಂಭತ್ತು ನಗರಗಳಲ್ಲಿಯೇ ಇವೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

40 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಪ್ರಮುಖ ನಗರಗಳಲ್ಲಿ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಗೆ ಕೇಂದ್ರ ಸರ್ಕಾರವು ಹೆಚ್ಚಿನ ಗಮನ ಹರಿಸುತ್ತಿದೆ. ಚಾರ್ಜಿಂಗ್‌ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಸಚಿವಾಲಯವು ಜನವರಿ 14ರಂದು ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ADVERTISEMENT

ದೇಶದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಮತ್ತು ಅಳವಡಿಕೆಗೆ ಹೆಚ್ಚಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.ಸಾರ್ವಜನಿಕ ಬಳಕೆಯ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಗೆ ಬಿಇಇ, ಇಇಎಸ್‌ಎಲ್‌, ಎನ್‌ಟಿಪಿಸಿ ಸೇರಿದಂತೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳನ್ನು ಸೇರಿಸಿಕೊಳ್ಳಲಾಗಿದೆ. ಗ್ರಾಹಕರ ವಿಶ್ವಾಸ ಗಳಿಸಲು ಹಲವು ಖಾಸಗಿ ಸಂಘ–ಸಂಸ್ಥೆಗಳು ಸಹ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲು ಮುಂದೆಬಂದಿವೆ. ಈ ಒಂಭತ್ತು ನಗರಗಳಲ್ಲಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ ಪೂರ್ಣಗೊಂಡ ನಂತರ ಇತರೆ ನಗರಗಳಲ್ಲಿಯೂ ಹಂತ ಹಂತವಾಗಿ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಹೆದ್ದಾರಿಗಳ ಬಳಿ ಒಟ್ಟಾರೆ 22 ಸಾವಿರ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಈಗಾಗಲೇ ತಿಳಿಸಿವೆ. ಇದರಲ್ಲಿ ಇಂಡಿಯನ್‌ ಆಯಿಲ್‌ 10 ಸಾವಿರ, ಭಾರತ್‌ ಪೆಟ್ರೋಲಿಯಂ 7 ಸಾವಿರ ಹಾಗೂ ಇನ್ನುಳಿದ 5 ಸಾವಿರ ಚಾರ್ಜಿಂಗ್‌ ಕೇಂದ್ರವನ್ನು ಹಿಂದುಸ್ತಾನ್‌ ಪೆಟ್ರೊಲಿಯಂ ಸ್ಥಾಪಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.