ADVERTISEMENT

ಇ.ವಿ ಸಬ್ಸಿಡಿ ಮುಂದುವರಿಕೆ ಇಲ್ಲ: ಸಚಿವ ಪೀಯೂಷ್‌ ಗೋಯಲ್‌

ಪಿಟಿಐ
Published 3 ಜನವರಿ 2025, 15:33 IST
Last Updated 3 ಜನವರಿ 2025, 15:33 IST
ಪೀಯೂಷ್‌ ಗೋಯಲ್ –ಪಿಟಿಐ ಚಿತ್ರ
ಪೀಯೂಷ್‌ ಗೋಯಲ್ –ಪಿಟಿಐ ಚಿತ್ರ   

ನವದೆಹಲಿ: ‘ವಿದ್ಯುತ್‌ಚಾಲಿತ ವಾಹನಗಳಿಗೆ ನೀಡುತ್ತಿರುವ ಸಬ್ಸಿಡಿ ಯೋಜನೆಯ ಅವಧಿ ಮುಕ್ತಾಯಗೊಂಡ ಬಳಿಕ ಮತ್ತೆ ಸಬ್ಸಿಡಿ ಸೌಲಭ್ಯ ಮುಂದುವರಿಸುವ ಅಗತ್ಯವಿಲ್ಲ. ಇದಕ್ಕೆ ಇ.ವಿ ವಾಹನ ತಯಾರಿಕಾ ಕಂಪನಿಗಳು ಸರ್ವಾನುಮತದಿಂದ ಒಪ್ಪಿಗೆ ನೀಡಿವೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

ಶುಕ್ರವಾರ ವಿದ್ಯುತ್‌ಚಾಲಿತ ವಾಹನ ತಯಾರಿಕಾ ಕಂಪನಿಗಳ ಪ್ರತಿನಿಧಿಗಳೊಟ್ಟಿಗೆ ಬ್ಯಾಟರಿ ಚಾರ್ಜಿಂಗ್‌ ಕೇಂದ್ರಗಳು ಮತ್ತು ಬ್ಯಾಟರಿಗಳ ವಿನಿಮಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ ಬಳಿಕ ಅವರು ಮಾತನಾಡಿದರು.

ಚಾರ್ಜ್‌ ಖಾಲಿಯಾದ ಬ್ಯಾಟರಿಗಳನ್ನು ಚಾರ್ಜ್‌ ಮಾಡಿದ ಬ್ಯಾಟರಿಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಕಂಪನಿಗಳು ಸಹಕರಿಸಬೇಕು. ಬ್ಯಾಟರಿ ವಿನಿಮಯಕ್ಕಾಗಿ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು. ಆದರೆ, ಅವರು ಸಂಪನ್ಮೂಲ ಹಂಚಿಕೊಳ್ಳಲು ಇಚ್ಛಿಸುತ್ತಾರೆಯೇ ಅಥವಾ ತಮ್ಮದೆ ಆದ ಬ್ಯಾಟರಿಗಳೊಂದಿಗೆ ವಾಹನಗಳನ್ನು ಮಾರಾಟ ಮಾಡುತ್ತಾರೆಯೇ ಎಂಬುದನ್ನು ನಿರ್ಧರಿಸುವುದು ಕಂಪನಿಗಳಿಗೆ ಬಿಟ್ಟ ವಿಚಾರವಾಗಿದೆ ಎಂದರು.

ADVERTISEMENT

ಪೆಟ್ರೋಲ್‌ ಬಂಕ್‌ಗಳಲ್ಲಿ ಇ.ವಿ ಚಾರ್ಜಿಂಗ್‌ ಕೇಂದ್ರಗಳು/ ಬ್ಯಾಟರಿ ವಿನಿಮಯ ಸೌಲಭ್ಯ ಒದಗಿಸುವುದಕ್ಕೆ ಸಂಬಂಧಿಸಿದಂತೆ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪಿಇಎಸ್‌ಒ) ಕರಡು ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಎಂದರು.

ಕೇಂದ್ರ ಸರ್ಕಾರವು ಕಳೆದ ವರ್ಷದ ಮಾರ್ಚ್‌ನಲ್ಲಿ ಹೊಸ ಇ.ವಿ ನೀತಿ ಪ್ರಕಟಿಸಿದೆ. ಇದರಡಿ ದೇಶದಲ್ಲಿ ಕನಿಷ್ಠ ₹4,150 ಕೋಟಿ ಬಂಡವಾಳ ಹೂಡಿಕೆ ಮಾಡಿ ಇ.ವಿ ತಯಾರಿಕಾ ಘಟಕ ಸ್ಥಾಪಿಸುವ ಕಂಪನಿಗಳಿಗೆ ಆಮದು ಸುಂಕದಲ್ಲಿ ರಿಯಾಯಿತಿ ಪ್ರಕಟಿಸಿದೆ.  

ಫೇಮ್‌ 2 ಯೋಜನೆಯಡಿ ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ 10,763 ಚಾರ್ಜಿಂಗ್‌ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದೆ. ಪಿಎಂ ಇ–ಡ್ರೈವ್‌ ಯೋಜನೆಯಡಿ ವಿದ್ಯುತ್‌ಚಾಲಿತ ಬಸ್‌, ತ್ರಿಚಕ್ರವಾಹನ, ಆಟೊರಿಕ್ಷಾ ಮತ್ತು ದ್ವಿಚಕ್ರವಾಹನಗಳಿಗೆ ಪ್ರೋತ್ಸಾಹ ಧನ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.