
ಮುಂಬೈ: ಎಸ್‌ಯುವಿ ಮಾರಾಟದ ಪ್ರಮಾಣವು ತನ್ನ ಒಟ್ಟು ವಾಹನಗಳ ಮಾರಾಟದ ಶೇಕಡ 70ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಲಿದೆ ಎಂದು ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಅಂದಾಜು ಮಾಡಿದೆ.
ಟಾಟಾ ಸಿಯಾರಾ ಎಸ್‌ಯುವಿಯನ್ನು ಬಿಡುಗಡೆ ಮಾಡಿರುವ ಕಂಪನಿಯು, ಬಹಳ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಮಧ್ಯಮ ಗಾತ್ರದ ಎಸ್‌ಯುವಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ವಿಶ್ವಾಸದಲ್ಲಿದೆ.
ಜಿಎಸ್‌ಟಿ ದರದಲ್ಲಿ ಈಚೆಗೆ ಆಗಿರುವ ಇಳಿಕೆಯ ಕಾರಣದಿಂದಾಗಿ ಪ್ರಯಾಣಿಕ ವಾಹನಗಳ ಒಟ್ಟು ಮಾರಾಟದಲ್ಲಿ ಎಸ್‌ಯುವಿ ಹೊರತುಪಡಿಸಿದ ವಾಹನಗಳ ಪಾಲು ತುಸು ಹೆಚ್ಚಾಗುವ ನಿರೀಕ್ಷೆ ಇದೆ. ಇಡೀ ಉದ್ಯಮದ ಮಟ್ಟದಲ್ಲಿ ಎಸ್‌ಯುವಿ ಮಾರಾಟದ ಪ್ರಮಾಣವು ಶೇ 55ರಿಂದ ಶೇ 60ರ ಮಟ್ಟದಲ್ಲಿ ಸ್ಥಿರವಾಗುವ ನಿರೀಕ್ಷೆ ಇದೆ ಎಂದು ಕಂಪನಿಯ ಸಿಇಒ ಶೈಲೇಶ್ ಚಂದ್ರ ಹೇಳಿದ್ದಾರೆ.
ಕಂಪನಿಯು ಬಿಡುಗಡೆ ಮಾಡಿರುವ ಸಿಯಾರಾ ಎಸ್‌ಯುವಿ ವಾಹನವು, ಹುಂಡೈ ಕ್ರೇಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಾದರಿಗಳಿಗೆ ಪೈಪೋಟಿ ನೀಡಲಿದೆ. ಸಿಯಾರಾ ವಾಹನದ ಆರಂಭಿಕ ಪರಿಚಯಾತ್ಮಕ ಬೆಲೆಯು ₹11.49 ಲಕ್ಷ. ಇದು ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಸಿಯಾರಾ ಇ.ವಿ. ಮುಂದಿನ ಹಣಕಾಸು ವರ್ಷದಲ್ಲಿ ಬಿಡುಗಡೆ ಆಗಲಿದೆ.
‘ಜಿಎಸ್‌ಟಿ ದರ ಪರಿಷ್ಕರಣೆ ಜಾರಿಗೆ ಬಂದ ನಂತರದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವರ್ಗದ ವಾಹನಗಳ ಮಾರಾಟವು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಪಂಚ್ ಮತ್ತು ನೆಕ್ಸಾನ್ ಮಾದರಿಗಳಿಂದಾಗಿ ಈ ವರ್ಗದಲ್ಲಿ ನಾವು ಮುಂಚೂಣಿಯಲ್ಲಿದ್ದುದರಿಂದಾಗಿ, ದರ ಇಳಿಕೆಯು ನಮಗೆ ಉತ್ತೇಜನ ನೀಡಿದೆ’ ಎಂದು ಶೈಲೇಶ್ ಚಂದ್ರ ಹೇಳಿದ್ದಾರೆ.
ಸಿಯಾರಾ ಮಾದರಿಯನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಕಂಪನಿಯು ಅದನ್ನು ಇಂದಿನ ತಲೆಮಾರಿನ ಗ್ರಾಹಕರಿಗೂ ಇಷ್ಟವಾಗುವಂತೆ ಮರುರೂಪಿಸಬೇಕಿತ್ತು ಎಂದು ಅವರು ತಿಳಿಸಿದ್ದಾರೆ.
ಸಿಯಾರಾ ವಾಹನಗಳ ಬುಕಿಂಗ್ ಡಿಸೆಂಬರ್ 16ರಿಂದ ಶುರುವಾಗಲಿದೆ. ವಾಹನಗಳನ್ನು ಗ್ರಾಹಕರಿಗೆ ಜನವರಿ 15ರಿಂದ ಹಸ್ತಾಂತರ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.