ADVERTISEMENT

ನವದೆಹಲಿ: ರಫ್ತುದಾರರಿಗೆ 6 ವರ್ಷ ನೆರವು ಸಾಧ್ಯತೆ

ಪಿಟಿಐ
Published 24 ಆಗಸ್ಟ್ 2025, 15:46 IST
Last Updated 24 ಆಗಸ್ಟ್ 2025, 15:46 IST
   

ನವದೆಹಲಿ: ರಫ್ತು ವಹಿವಾಟಿನಲ್ಲಿ ತೊಡಗಿರುವವರಿಗೆ ‘ರಫ್ತು ಉತ್ತೇಜನಾ ಮಿಷನ್’ ಅಡಿಯಲ್ಲಿ ಆರು ಹಣಕಾಸು ವರ್ಷಗಳವರೆಗೆ ₹25 ಸಾವಿರ ಕೋಟಿ ಮೊತ್ತದ ಬೆಂಬಲ ಕ್ರಮ ಘೋಷಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಮಿಷನ್‌ ಅನ್ನು ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಲಾಗಿದೆ.

‘ರಫ್ತುದಾರರಿಗೆ ಸಾಲವು ಸುಲಭವಾಗಿ ಹಾಗೂ ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವುದು ಮುಖ್ಯ ಆದ್ಯತೆಯಾಗಿ ಇರಲಿದೆ’ ಎಂದು ಮೂಲಗಳು ಹೇಳಿವೆ. ಪ್ರಸ್ತಾವನೆಯನ್ನು ಕೇಂದ್ರ ವಾಣಿಜ್ಯ ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ರವಾನಿಸಿದೆ.

ವಾಣಿಜ್ಯ ಸಚಿವಾಲಯದ ಪ್ರಸ್ತಾವಕ್ಕೆ ಅನುಮತಿ ದೊರೆತು, ಅದು ಅನುಷ್ಠಾನಕ್ಕೆ ಬಂದರೆ ರಫ್ತು ವಹಿವಾಟಿನಲ್ಲಿ ತೊಡಗಿರುವವರಿಗೆ ಜಾಗತಿಕ ಮಟ್ಟದ ವ್ಯಾಪಾರ ಅನಿಶ್ಚಿತತೆಗಳಿಂದ ತುಸುಮಟ್ಟಿಗೆ ರಕ್ಷಣೆ ಸಿಕ್ಕಂತೆ ಆಗುತ್ತದೆ. ಅಮೆರಿಕವು ಭಾರತದ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸಿದೆ. ಶೇ 25ರಷ್ಟು ಸುಂಕವು ಈಗಾಗಲೇ ಜಾರಿಗೆ ಬಂದಿದೆ, ಇನ್ನುಳಿದ ಶೇ 25ರಷ್ಟು ಸುಂಕವು ಆಗಸ್ಟ್‌ 27ರಿಂದ ಅನ್ವಯ ಆಗಲಿದೆ.

ADVERTISEMENT

ಹಣಕಾಸು ಸಚಿವಾಲಯದಿಂದ ಅನುಮತಿ ದೊರೆತ ನಂತರದಲ್ಲಿ ವಾಣಿಜ್ಯ ಸಚಿವಾಲಯವು ತನ್ನ ಪ‍್ರಸ್ತಾವನೆಯನ್ನು ಕೇಂದ್ರ ಸಂಪುಟದ ಮುಂದೆ ಇರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.