ನವದೆಹಲಿ: ನವೆಂಬರ್‌ನಲ್ಲಿ ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚಾಗಿದ್ದು, ವಿದೇಶಿ ವ್ಯಾಪಾರದ ಕೊರತೆಯು ₹3.21 ಲಕ್ಷ ಕೋಟಿ ಆಗಿದೆ. ಇದು ಗರಿಷ್ಠ ಮಟ್ಟವಾಗಿದೆ.
ಮದುವೆ ಹಾಗೂ ಹಬ್ಬದ ಋತುವಿನಿಂದಾಗಿ ಚಿನ್ನದ ಆಮದು ಪ್ರಮಾಣದಲ್ಲಿ ಏರಿಕೆಯಾಗಿರುವುದೇ ಇದಕ್ಕೆ ಕಾರಣ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ತಿಳಿಸಿದೆ.
ರಫ್ತು ಮೌಲ್ಯಕ್ಕಿಂತ ಆಮದು ಮೌಲ್ಯ ಹೆಚ್ಚಿದ್ದರೆ ಈ ಅಂತರವನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ.
ನವೆಂಬರ್‌ನಲ್ಲಿ ₹2.72 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತು ಪ್ರಮಾಣದಲ್ಲಿ ಶೇ 4.85ರಷ್ಟು ಏರಿಕೆಯಾಗಿದೆ.
₹5.93 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 27ರಷ್ಟು ಏರಿಕೆಯಾಗಿದೆ. ಚಿನ್ನ, ಬೆಳ್ಳಿ, ಸಸ್ಯಜನ್ಯ ಎಣ್ಣೆ ಮತ್ತು ರಸಗೊಬ್ಬರದ ಆಮದಿನಲ್ಲಿ ಏರಿಕೆಯಾಗಿದೆ.
ಚಿನ್ನ ಆಮದು ದಾಖಲೆ: ನವೆಂಬರ್‌ನಲ್ಲಿ ಭಾರತವು ದಾಖಲೆ ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡಿಕೊಂಡಿದೆ. ಒಟ್ಟು ₹1.26 ಲಕ್ಷ ಕೋಟಿ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ₹29 ಸಾವಿರ ಕೋಟಿ ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. ಇದಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.