ನವದೆಹಲಿ: ದೇಶದ ವ್ಯಾಪಾರ ಸರಕುಗಳ ರಫ್ತು ಮೌಲ್ಯವು ಜನವರಿ ತಿಂಗಳಿನಲ್ಲಿ ₹3.16 ಲಕ್ಷ ಕೋಟಿಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ತಿಳಿಸಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹3.24 ಲಕ್ಷ ಕೋಟಿ ಮೌಲ್ಯ ಇತ್ತು. ಇದಕ್ಕೆ ಹೋಲಿಸಿದರೆ ಶೇ 2.38ರಷ್ಟು ಕಡಿಮೆ ಆಗಿದ್ದು, ಸತತ ಮೂರನೇ ತಿಂಗಳೂ ರಫ್ತು ಪ್ರಮಾಣ ಇಳಿಕೆ ಆಗಿದೆ. ತೈಲ ಬೆಲೆಯಲ್ಲಿನ ಏರಿಳಿತ ಮತ್ತು ಜಾಗತಿಕ ಅನಿಶ್ಚಿತತೆಯೇ ಇಳಿಕೆಗೆ ಕಾರಣವಾಗಿದೆ ಎಂದು ತಿಳಿಸಿದೆ.
ಆಮದು ಮತ್ತು ರಫ್ತು ವಹಿವಾಟಿನ ನಡುವಿನ ವ್ಯತ್ಯಾಸವಾದ ವ್ಯಾಪಾರ ಕೊರತೆ ₹1.99 ಲಕ್ಷ ಕೋಟಿಯಾಗಿದೆ. ಆಮದು ಪ್ರಮಾಣವು ಶೇ 10ರಷ್ಟು ಹೆಚ್ಚಳವಾಗಿದ್ದು, ₹5.16 ಲಕ್ಷ ಕೋಟಿಯಷ್ಟಾಗಿದೆ.
ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್–ಜನವರಿ ಅವಧಿಯಲ್ಲಿ ರಫ್ತು ಶೇ 1.39ರಷ್ಟು ಹೆಚ್ಚಳವಾಗಿದ್ದು, ₹31.19 ಲಕ್ಷ ಕೋಟಿಯಾಗಿದೆ. ಆಮದು ಶೇ 7ರಷ್ಟು ಏರಿಕೆಯಾಗಿದ್ದು, ₹52.30 ಲಕ್ಷ ಕೋಟಿಯಾಗಿದೆ.
ಹತ್ತು ತಿಂಗಳ ಅವಧಿಯಲ್ಲಿ ವ್ಯಾಪಾರ ಕೊರತೆ ₹21.11 ಲಕ್ಷ ಕೋಟಿಗೆ ವಿಸ್ತರಿಸಿದೆ.
₹23,290 ಕೋಟಿ ಮೌಲ್ಯದ ಚಿನ್ನ ಆಮದಾಗಿದೆ. ಕಚ್ಚಾ ತೈಲ ಆಮದು 2024ರ ಜನವರಿಯಲ್ಲಿ ₹1.43 ಲಕ್ಷ ಕೋಟಿಯಷ್ಟಿತ್ತು. ಅದು ಪ್ರಸ್ತುತ ₹1.16 ಲಕ್ಷ ಕೋಟಿ ಆಗಿದೆ ಎಂದು ತಿಳಿಸಿದೆ.
ಶೇ 39ರಷ್ಟು ಏರಿಕೆ: ಜನವರಿಯಲ್ಲಿ ಅಮೆರಿಕಕ್ಕೆ ದೇಶದ ರಫ್ತು ಪ್ರಮಾಣವು ಶೇ 39ರಷ್ಟು ಏರಿಕೆಯಾಗಿದ್ದು, ಒಟ್ಟು ₹73,308 ಕೋಟಿ ಆಗಿದೆ. ಆಮದು ಮೌಲ್ಯವು ₹31,008 ಕೋಟಿ ಆಗಿದ್ದು, ಶೇ 33ರಷ್ಟು ಪ್ರಮಾಣ ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.