ADVERTISEMENT

ವರ್ತಕರಿಗೆ ಸಾಲ ನೀಡಲು ನೆರವು: ದೇಶಿ ಕಂಪನಿ ಜೊತೆ ಫೇಸ್‌ಬುಕ್ ಒಪ್ಪಂದ

ರಾಯಿಟರ್ಸ್
Published 20 ಆಗಸ್ಟ್ 2021, 11:00 IST
Last Updated 20 ಆಗಸ್ಟ್ 2021, 11:00 IST
ಫೇಸ್‌ಬುಕ್‌
ಫೇಸ್‌ಬುಕ್‌   

ನವದೆಹಲಿ: ಸಣ್ಣ ಪ್ರಮಾಣದ ವರ್ತಕರಿಗೆ ಸಾಲ ನೀಡಲು ನೆರವಾಗಲು ಫೇಸ್‌ಬುಕ್‌ ಕಂಪನಿಯು ಆನ್‌ಲೈನ್‌ ಮೂಲಕ ಸಾಲ ವಿತರಿಸುವ ದೇಶಿ ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ವರ್ತಕರು ತನ್ನ ಮೂಲಕ ಜಾಹೀರಾತು ನೀಡುವಂತೆ ಆಗಬೇಕು ಎಂಬ ಉದ್ದೇಶದಿಂದ ಫೇಸ್‌ಬುಕ್‌ ಈ ಕ್ರಮಕ್ಕೆ ಮುಂದಾಗಿದೆ.

ಫೇಸ್‌ಬುಕ್‌ ಕಂಪನಿಯು ಇಂಡಿಫೈ ಕಂಪನಿಯ ಜೊತೆ ಕೈಜೋಡಿಸಲಿದೆ. ₹ 5 ಲಕ್ಷದಿಂದ ₹ 50 ಲಕ್ಷದವರೆಗಿನ ಸಾಲವನ್ನು ನೀಡಲು ನೆರವಾಗಲಿದೆ. ಈ ಸಾಲಕ್ಕೆ ವಾರ್ಷಿಕ ಶೇಕಡ 20ರವರೆಗೆ ಬಡ್ಡಿ ನಿಗದಿ ಮಾಡಲಾಗುತ್ತದೆ ಎಂದು ಫೇಸ್‌ಬುಕ್‌ನ ಭಾರತದ ವ್ಯವಹಾರಗಳ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಣ್ಣ ಪ್ರಮಾಣದ ವರ್ತಕರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಿದಾಗ, ಅವರು ತನ್ನ ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆ್ಯಪ್‌ ವೇದಿಕೆಗಳನ್ನು ತಮ್ಮ ವಹಿವಾಟು ಬೆಳೆಸಲು ಬಳಸಿಕೊಳ್ಳುತ್ತಾರೆ ಎಂದು ಫೇಸ್‌ಬುಕ್‌ ಹೇಳಿದೆ. ‘ಈ ಯೋಜನೆಯಿಂದ ನಾವು ಹಣ ಮಾಡಲು ಯೋಚಿಸುತ್ತಿಲ್ಲ. ಇದರಲ್ಲಿ ನಾವು ಲಾಭದ ಪಾಲು ಪಡೆಯುತ್ತಿಲ್ಲ. ಆದರೆ, ಈ ಯೋಜನೆಯಿಂದ ಉದ್ಯಮ ವಲಯದಲ್ಲಿ ಬೆಳವಣಿಗೆ ಆಗುತ್ತದೆ. ಅದು ಕಾಲಕ್ರಮೇಣ ನಮಗೂ ಪ್ರಯೋಜನ ತಂದುಕೊಡುತ್ತದೆ ಎಂದು ಆಶಿಸಿದ್ದೇವೆ’ ಎಂದು ಮೋಹನ್ ತಿಳಿಸಿದರು. ಸಾಲ ಕೊಡುವ ಈ ಯೋಜನೆಗೆ ಫೇಸ್‌ಬುಕ್‌ ಹಣ ಹೂಡಿಕೆ ಮಾಡಿಲ್ಲ.

ADVERTISEMENT

ಫೇಸ್‌ಬುಕ್‌ ಮೂಲಕ ಅಥವಾ ಫೇಸ್‌ಬುಕ್‌ ಸಮೂಹಕ್ಕೆ ಸೇರಿದ ಯಾವುದೇ ಆ್ಯಪ್‌ ಮೂಲಕ ಕನಿಷ್ಠ 180 ದಿನಗಳಿಂದ ಜಾಹೀರಾತು ನೀಡುತ್ತಿರುವ ಸಣ್ಣ ಉದ್ದಿಮೆಗಳಿಗೆ ಈ ಸಾಲ ಸೌಲಭ್ಯ ಸಿಗಲಿದೆ. ಹೊಸ ಯೋಜನೆಯು ಇನ್ನಷ್ಟು ಉದ್ದಿಮೆಗಳು ಈ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ನೀಡಲು ನೆರವಾಗಬಹುದು.

ಫೇಸ್‌ಬುಕ್‌ಗೆ ಭಾರತದಲ್ಲಿ 41 ಕೋಟಿಗೂ ಹೆಚ್ಚಿನ ಬಳಕೆದಾರರು ಇದ್ದಾರೆ. ವಾಟ್ಸ್‌ಆ್ಯಪ್‌ ಬಳಕೆದಾರರು ಭಾರತದಲ್ಲಿ 53 ಕೋಟಿಗೂ ಹೆಚ್ಚು ಇದ್ದಾರೆ. ಇದು ವಾಟ್ಸ್ಆ್ಯಪ್‌ಗೆ ಇರುವ ಅತಿದೊಡ್ಡ ಮಾರುಕಟ್ಟೆ. ಇನ್‌ಸ್ಟಾಗ್ರಾಂ ಬಳಕೆದಾರರ ಸಂಖ್ಯೆ ಭಾರತದಲ್ಲಿ 21 ಕೋಟಿಗಿಂತ ಹೆಚ್ಚಿದೆ.

ವಾಟ್ಸ್‌ಆ್ಯಪ್‌ ಕಂಪನಿಯು ಬ್ಯಾಂಕ್‌ಗಳ ಜೊತೆ ಸಂಬಂಧವನ್ನು ಇನ್ನಷ್ಟು ಬಲಪಡಿಸಿಕೊಂಡು, ಪಿಂಚಣಿ ಹಾಗೂ ವಿಮಾ ಸೌಲಭ್ಯವನ್ನು ತನ್ನ ಮೂಲಕ ಗ್ರಾಹಕರಿಗೆ ತಲುಪಿಸುವ ಗುರಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.